ಕೊರೋನ ತಡೆಗೆ ಸಾಮೂಹಿಕ ರೋಗ ನಿರೋಧಕ ಶಕ್ತಿಯ ಅವಲಂಬನೆ ಸಾಧ್ಯವಿಲ್ಲ: ಕೇಂದ್ರ

Update: 2020-07-30 17:53 GMT

ಹೊಸದಿಲ್ಲಿ,ಜು.30: ಜನಸಂಖ್ಯೆ ಹಾಗೂ ವಿಸ್ತೀರ್ಣವನ್ನು ಪರಿಗಣನೆಗೆ ತೆಗೆದುಕೊಂಡರೆ ಭಾರತದಲ್ಲಿ ಕೊರೋನ ವೈರಸ್ ಸೋಂಕಿನ  ಹರಡುವಿಕೆಯ ತಡೆಗೆ ಸಾಮೂಹಿಕ ರೋಗ ನಿರೋಧಕ ಶಕ್ತಿ(ಹರ್ಡ್ ಇಮ್ಯೂನಿಟಿ)ಯನ್ನು ಅವಲಂಭಿಸಿರಲು ಸಾಧ್ಯವಿಲ್ಲವೆಂದು ಕೇಂದ್ರ ಸರಕಾರ ಗುರುವಾರ ಸ್ಪಷ್ಟಪಡಿಸಿದೆ. ಕೊರೋನ ವೈರಸ್‌ನ ಹಾವಳಿಯನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಬೇಕಾದರೆ ಲಸಿಕೆಯನ್ನು ಕಂಡುಹಿಡಿಯವುದೇ ಏಕೈಕ ಮಾರ್ಗವಾಗಿದೆಯೆಂದು ಅದು ಪ್ರತಿಪಾದಿಸಿದೆ.

‘‘ಸಾಮೂಹಿಕ ರೋಗ ನಿರೋಧಕ ಶಕ್ತಿ (ಹರ್ಡ್ ಇಮ್ಯೂನಿಟಿ)ಯು ಕೊರೋನ ವೈರಸ್ ರೋಗದಿಂದ ಪರೋಕ್ಷವಾಗಿ ರಕ್ಷಣೆಯನ್ನು ನೀಡುತ್ತದೆ ಹಾಗೂ ಈ ಸಾಂಕ್ರಾಮಿಕ ಕಾಯಿಲೆಯಿಂದ ಜನಸಮುದಾಯವನ್ನು ರಕ್ಷಿಸುತ್ತದೆ. ಆದರೆ ಲಸಿಕೆಯನ್ನು ಅಭಿವೃದ್ಧಿಪಡಿಸಿದಲ್ಲಿ ಅಥವಾ ರೋಗದಿಂದ ಜನಸಮುದಾಯವು ಈಗಾಗಲೇ ಬಾಧಿತವಾಗಿ, ಬಳಿಕ ಚೇತರಿಸಿಕೊಂಡಲ್ಲಿ ಅವರಿಗೆ ಸಾಮೂಹಿಕ ರೋಗನಿರೋಧಕ ಶಕ್ತಿ ಪ್ರಾಪ್ತಿಯಾಗುತ್ತದೆ. ಭಾರತದಂತಹ ಭಾರೀ ಜನಸಂಖ್ಯೆಯುಳ್ಳ ಹಾಗೂ ಬೃಹತ್ ವಿಸ್ತೀರ್ಣದ ದೇಶದಲ್ಲಿ ಕೊರೋನ ತಡೆಗೆ ಸಾಮೂಹಿಕ ರೋಗನಿರೋಧಕ ಶಕ್ತಿಯನ್ನು ಅವಲಂಭಿಸಲು ಸಾಧ್ಯವಿಲ್ಲ. ಲಸಿಕೆಯನ್ನು ಅಭಿವೃದ್ಧಿಪಡಿಸಿದಲ್ಲಿ ಮಾತ್ರವೇ ಕೊರೋನವನ್ನು ನಿಯಂತ್ರಿಸಲು ಸಾಧ್ಯವಿದೆ’’ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಸಾಕಷ್ಟು ಸಂಖ್ಯೆಯ ಜನರು ರೋಗನಿರೋಧಕಶಕ್ತಿಯನ್ನು ಪಡೆದಲ್ಲಿ ಸಹಜವಾಗಿಯೇ ವೈರಸ್‌ನ ಹರಡುವಿಕೆಯು ನಿಲ್ಲುವುದನ್ನು ಸಾಮೂಹಿಕ ರೋಗನಿರೋಧಕ ಅಥವಾ ಹರ್ಡ್ ಇಮ್ಯೂನಿಟಿ ಎಂದು ಕರೆಯಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News