ಸುತ್ತಿಗೆಯಿಂದ ವ್ಯಕ್ತಿಗೆ ಬಡಿದ ಗೋರಕ್ಷಕರು: ಮೂಕಪ್ರೇಕ್ಷಕರಾದ ಪೊಲೀಸರು ಮತ್ತು ಜನರು

Update: 2020-08-01 04:18 GMT

ಹೊಸದಿಲ್ಲಿ, ಆ.1: ಜಾನುವಾರು ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನ ಮೇಲೆ ಗೋರಕ್ಷಕರು ಪೊಲೀಸರ ಸಮ್ಮುಖದಲ್ಲೇ ಸುತ್ತಿಗೆಯಿಂದ ಬಡಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಕನ್ನಡಿಯಾಗಿದೆ.

ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಗಳೇ ಅಧಿಕ ಇರುವ ಗುರುಗಾಂವ್‌ನ ಗ್ಲಿಸ್ಟರಿಂಗ್ ಟವರ್ಸ್‌ ಬಳಿ ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಪಿಕ್ ಅಪ್ ಟ್ರಕ್ ಚಾಲಕ ಲುಕ್ಮಾನ್ ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿ. ಈತನ ಮೇಲೆ ಗೋರಕ್ಷಕರು ಸುತ್ತಿಗೆಯಿಂದ ತೀವ್ರ ಹಲ್ಲೆ ನಡೆಸಿದ್ದಾರೆ. ಜನಸಾಮಾನ್ಯರು ಮತ್ತು ಪೊಲೀಸರು ಘಟನೆಗೆ ಮೂಕಪ್ರೇಕ್ಷಕರಾದರು. ಇದಕ್ಕೂ ಮುನ್ನ ದುಷ್ಕರ್ಮಿಗಳ ತಂಡವು ಲುಕ್ಮಾನ್ ಚಲಾಯಿಸುತ್ತಿದ್ದ ಪಿಕ್ ಅಪ್ ಅನ್ನು ಸುಮಾರು ಎಂಟು ಕಿಲೋಮೀಟರ್ ಬೆನ್ನಟ್ಟಿ ತಡೆದಿದ್ದರು.

ಪಿಕ್ ಅಪ್‌ನಲ್ಲಿ ಗೋಮಾಂಸ ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂಬ ಶಂಕೆಯಿಂದ ಲುಕ್ಮಾನ್ ರನ್ನು ಟ್ರಕ್‌ನಿಂದ ಎಳೆದು ಹೊರಹಾಕಿ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ. ಈ ಹೃದಯ ಕಲಕುವ ಘಟನೆ 2015ರ ದಾದ್ರಿ ಹತ್ಯೆಯನ್ನು ನೆನಪಿಸಿದೆ.

ದಾದ್ರಿ ಘಟನೆಯ ಮಾದರಿಯಲ್ಲೇ ಪೊಲೀಸರು ಶಂಕಿತರನ್ನು ಸೆರೆ ಹಿಡಿಯುವ ಬದಲು, ಟ್ರಕ್‌ನಲ್ಲಿದ್ದ ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸುವ ತರಾತುರಿಯಲ್ಲಿದ್ದರು ಎಂಬ ಆರೋಪ ಕೇಳಿಬಂದಿದೆ. ಹಲ್ಲೆಕೋರರ ಮುಖಗಳು ವೀಡಿಯೊದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದರೂ, ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಸುತ್ತಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಬಳಿಕ ಮತ್ತೆ ಪಿಕ್ ಅಪ್ ಟ್ರಕ್‌ನಲ್ಲಿ ಹಾಕಿ ಲುಕ್ಮಾನ್ ರನ್ನು ಗುರುಗಾಂವ್‌ನ ಬಾದಶಹಪುರ ಗ್ರಾಮಕ್ಕೆ ಕರೆದೊಯ್ದು ಮತ್ತೆ ಹಲ್ಲೆ ನಡೆಸಲಾಗಿದೆ. ಈ ಹಂತದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ತಡೆದರೂ, ಹಲ್ಲೆಕೋರರು ನಿರ್ಭಯವಾಗಿ ಅವರ ಮೇಲೂ ಹರಿಹಾಯ್ದರು.

ಲುಕ್ಮಾನ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಾಗಿದೆ.

ಈ ನಡುವೆ ಪ್ರತಿಕ್ರಿಯಿಸಿರುವ ಪಿಕಪ್ ಟ್ರಕ್ ಮಾಲಕ, ಅದರಲ್ಲಿ ಇದ್ದಿದ್ದು ಎಮ್ಮೆ ಮಾಂಸವಾಗಿದ್ದು, 50 ವರ್ಷಗಳಿಂದ ಈ ವ್ಯವಹಾರ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News