ಆಶಾ ಭೋಸ್ಲೆ ಬಂಗಲೆಗೆ ರೂ. 2 ಲಕ್ಷ ವಿದ್ಯುತ್ ಬಿಲ್ ಶಾಕ್: ದೂರು ನೀಡಿದ ಗಾಯಕಿ

Update: 2020-08-01 13:32 GMT

ಮುಂಬೈ: ಜೂನ್ ತಿಂಗಳಿಗೆ ದುಬಾರಿ ವಿದ್ಯುತ್ ಬಿಲ್‍ನ  ಶಾಕ್ ನೀಡುತ್ತಿರುವುದಕ್ಕೆ ಟೀಕೆಗೊಳಗಾಗಿರುವ ಮಹಾರಾಷ್ಟ್ರ ವಿದ್ಯುತ್ ವಿತರಣಾ ಸಂಸ್ಥೆ ಮಹಾಡಿಸ್ಕಾಂಗೆ ಇದೀಗ ಖ್ಯಾತ ಗಾಯಕಿ ಆಶಾ ಭೋಸ್ಲೇ ಅವರಿಂದಲೇ ದೂರು ಬಂದಿದೆ. ಕಾರಣ ಆಶಾ ಅವರ ಲೋನಾವಾಲದಲ್ಲಿರುವ ಬಂಗಲೆಗೆ ರೂ. 2 ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯುತ್ ಬಿಲ್ ಬಂದಿದೆ.

‘ವಾಸ್ತವಿಕ ಮೀಟರ್ ರೀಡಿಂಗ್’ ಆಧಾರದಲ್ಲಿಯೇ ಬಿಲ್ ನೀಡಲಾಗಿದೆ ಎಂದು ಈಗಾಗಲೇ ಆಶಾ ಅವರಿಗೆ ತಿಳಿಸಲಾಗಿದೆ ಎಂದು ಮಹಾಡಿಸ್ಕಾಂ ಹೇಳಿದೆ. ಆಶಾ ಅವರ ಲೋನಾವಾಲ ಬಂಗಲೆಗೆ ಮೇ ಮತ್ತು ಎಪ್ರಿಲ್ ತಿಂಗಳಿನ ಬಿಲ್ ಮೊತ್ತ ಕ್ರಮವಾಗಿ ರೂ. 8,855.44 ಹಾಗೂ ರೂ. 8,996.98  ಆಗಿದ್ದರೆ ಜೂನ್ ತಿಂಗಳಿಗೆ ಮಾತ್ರ ಬರೋಬ್ಬರಿ ರೂ 2,08,870 ಬಿಲ್ ಬಂದಿತ್ತು.

ಆಶಾ ಅವರಿಂದ ದೂರು ಬಂದ ನಂತರ ಪುಣೆ ವೃತ್ತದ ಹಿರಿಯ ಅಧಿಕಾರಿಯೊಬ್ಬರು ಸ್ವತಃ ಆಶಾ ಅವರ ಬಂಗಲೆಗೆ ತೆರಳಿ ಅಲ್ಲಿನ ಮೀಟರ್ ರೀಡಿಂಗ್ ನೋಡಿ ಪರಿಶೀಲಿಸಿದ್ದು ಬಿಲ್ ಮೊತ್ತ ಸರಿಯಾಗಿದೆ ಎಂದು ಮಹಾಡಿಸ್ಕಾಂ ವಕ್ತಾರರು ತಿಳಿಸಿದ್ದಾರೆ. ಬಂಗಲೆ ಮುಚ್ಚಿರಲಿಲ್ಲ ಹಾಗೂ ಅಲ್ಲಿ ಚಿತ್ರೀಕರಣ ನಡೆಯುತ್ತಿತ್ತು ಎಂದೂ ತಿಳಿದು ಬಂದಿದೆ ಎಂದು ಆ ಅಧಿಕಾರಿ ತಿಳಿಸಿದ್ದಾರೆ.

ಈ ಹಿಂದೆ 2016ರಲ್ಲಿ ಕೂಡ ಆಶಾ ಭೋಸ್ಲೇ ಅವರು ತಾವು ಅಷ್ಟೊಂದಾಗಿ ಉಪಯೋಗಿಸದ ಬಂಗಲೆಗೆ ದುಬಾರಿ ವಿದ್ಯುತ್ ಬಿಲ್ ಬಂದಿದೆ ಎಂದು ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News