ಐದನೇ ಹಂತದ ವಂದೇ ಭಾರತ ಅಭಿಯಾನ ಆರಂಭಿಸಿದ ಏರ್ ಇಂಡಿಯಾ: 700 ವಿಮಾನ ಯಾನಗಳ ನಿರೀಕ್ಷೆ

Update: 2020-08-01 13:38 GMT

ಹೊಸದಿಲ್ಲಿ,ಆ.1: ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಶನಿವಾರ ವಂದೇ ಭಾರತ ಅಭಿಯಾನದ ಐದನೇ ಹಂತಕ್ಕೆ ಚಾಲನೆ ನೀಡಿದ್ದು,ಈ ಹಂತದಲ್ಲಿ ಭಾರತ ಮತ್ತು ಕನಿಷ್ಠ 53 ದೇಶಗಳ ನಡುವೆ ಸುಮಾರು 700 ವಿಮಾನ ಯಾನಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಜು.30ರವರೆಗಿನ ನಾಲ್ಕನೇ ಹಂತದಲ್ಲಿ ಏರ್ ಇಂಡಿಯಾ 617 ವಿಮಾನಯಾನಗಳನ್ನು ನಿರ್ವಹಿಸುವ ಮೂಲಕ ವಿದೇಶಗಳಲ್ಲಿ ಅತಂತ್ರರಾಗಿದ್ದ ಸುಮಾರು 110,383 ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆತಂದಿತ್ತು.

 ಐದನೇ ಹಂತದಲ್ಲಿ ಏರ್ ಇಂಡಿಯಾ ತನ್ನ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನೊಂದಿಗೆ ಸೇರಿಕೊಂಡು 53 ದೇಶಗಳಿಂದ 1.20 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ವಾಪಸ್ ಕರೆತರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿದವು. ಈ ಹಂತದಲ್ಲಿ ಏರ್ ಇಂಡಿಯಾ ತನ್ನ ಹೆಚ್ಚಿನ ವಿಮಾನಗಳ ನಿಯೋಜನೆಯನ್ನು ಮುಂದುವರಿಸಲಿದ್ದು,ಉತ್ತರ ಅಮೆರಿಕಾಕ್ಕೆ ಸುದೀರ್ಘ ಯಾನಗಳನ್ನೂ ಕೈಗೊಳ್ಳಲಿದೆ. ಬ್ರಿಟನ್ ಮತ್ತು ಕೆನಡಾಗಳಿಗೆ ಹೆಚ್ಚುವರಿ ಯಾನಗಳನ್ನು ನಿರ್ವಹಿಸಲಿರುವ ಅದು ಹಾಂಗ್‌ಕಾಂಗ್ ಮಾರ್ಗದಲ್ಲಿಯೂ ಸೇವೆ ಸಲ್ಲಿಸಲಿದೆ.

ಏರ್ ಇಂಡಿಯಾ ಮೇ 7ರಂದು ಹೊಸದಿಲ್ಲಿಯಿಂದ ಸಿಂಗಾಪುರಕ್ಕೆ ಯಾನವನ್ನು ನಿರ್ವಹಿಸುವ ಮೂಲಕ ವಂದೇ ಭಾರತ ಅಭಿಯಾನದಡಿ ತನ್ನ ಮೊದಲ ತೆರವು ಕಾರ್ಯಾಚರಣೆಯನ್ನು ಕೈಗೊಂಡಿತ್ತು. ವಂದೇ ಭಾರತ ಅಭಿಯಾನವು ವಿಶ್ವದ ಅತ್ಯಂತ ದೊಡ್ಡ ತೆರವು ಕಾರ್ಯಾಚರಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಮುನ್ನ 1990-91ರಲ್ಲಿ ವಿಶ್ವದ ಅತ್ಯಂತ ದೊಡ್ಡ ತೆರವು ಕಾರ್ಯಾಚರಣೆಯ ನೇತೃತ್ವವನ್ನೂ ಏರ್ ಇಂಡಿಯಾವೇ ವಹಿಸಿತ್ತು. ಆ ಸಂದರ್ಭದಲ್ಲಿ ಅದು ತನ್ನ ಪಾಲುದಾರ ವಿಮಾನಯಾನ ಸಂಸ್ಥೆಗಳ ಜೊತೆಗೂಡಿ ಕುವೈತ್‌ನಿಂದ 488 ಯಾನಗಳ ಮೂಲಕ 111,711 ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News