ಮೆಹಬೂಬ ಮುಫ್ತಿ ಬಂಧನ ಅವಧಿ ವಿಸ್ತರಣೆಗೆ ಚಿದಂಬರಂ ಟೀಕೆ

Update: 2020-08-01 13:54 GMT

ಹೊಸದಿಲ್ಲಿ, ಆ.1: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಬಂಧನ ಅವಧಿಯನ್ನು ಮೂರು ತಿಂಗಳು ವಿಸ್ತರಿಸಿರುವ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.

ಮೆಹಬೂಬರನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆ(ಪಿಎಸ್‌ಎ)ಯಡಿ ಕಳೆದ ಆಗಸ್ಟ್ 5ರಂದು ಬಂಧಿಸಲಾಗಿದೆ. ಇದೀಗ ಬಂಧನದ ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಿರುವುದರಿಂದ ಅವರು ಒಂದು ವರ್ಷಕ್ಕೂ ಹೆಚ್ಚು ಅವಧಿ ಬಂಧನದಲ್ಲಿ ಇರಬೇಕಾಗಿದೆ. ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಮೆಹಬೂಬ ಮುಫ್ತಿ ಬಂಧನದ ಅವಧಿ ವಿಸ್ತರಿಸಿರುವುದು ಕಾನೂನಿನ ದುರುಪಯೋಗ ಮತ್ತು ಸಂವಿಧಾನದತ್ತ ಹಕ್ಕಿನ ಮೇಲೆ ನಡೆಸಿದ ಪ್ರಹಾರವಾಗಿದೆ. ದಿನದ 24 ಗಂಟೆಯೂ ಭದ್ರತಾ ಸಿಬಂದಿಗಳ ರಕ್ಷಣೆಯಲ್ಲಿರುವ 61 ವರ್ಷದ ಮಾಜಿ ಮುಖ್ಯಮಂತ್ರಿಯೊಬ್ಬರು ಸಾರ್ವಜನಿಕ ಸುರಕ್ಷತೆಗೆ ಹೇಗೆ ಬೆದರಿಕೆಯಾಗುತ್ತಾರೆ? ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

ಷರತ್ತು ವಿಧಿಸಿ ಬಿಡುಗಡೆಯ ಪ್ರಸ್ತಾವವನ್ನು ಮೆಹಬೂಬ ತಿರಸ್ಕರಿಸಿದ್ದು ಸರಿಯಾದ ಕ್ರಮವಾಗಿದೆ. ಆತ್ಮಾಭಿಮಾನವುಳ್ಳ ಯಾವುದೇ ರಾಜಕೀಯ ಮುಖಂಡರೂ ಇದನ್ನೇ ಮಾಡುತ್ತಿದ್ದರು. ಮೆಹಬೂಬಾರ ಪಕ್ಷದ ಧ್ವಜದ ಬಣ್ಣ ಬಂಧನದ ಕಾರಣಗಳಲ್ಲಿ ಒಂದು ಎಂದು ಉಲ್ಲೇಖಿಸಿರುವುದನ್ನು ಗಮನಿಸಿದಾಗ ನಗು ಬರುತ್ತದೆ. 370ನೇ ವಿಧಿ ರದ್ಧತಿಯ ವಿರುದ್ಧ ಮಾತಾಡುವುದಿಲ್ಲ ಎಂದು ಅವರೇಕೆ ಒಪ್ಪಿಕೊಳ್ಳಬೇಕು. ಇದು ವಾಕ್‌ಸ್ವಾತಂತ್ರದ ಭಾಗವಲ್ಲವೇ? 370ನೇ ವಿಧಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ಪರ ವಕಾಲತ್ತು ನಡೆಸುವವರಲ್ಲಿ ನಾನೂ ಒಬ್ಬನಾಗಿದ್ದೇನೆ. 370ನೇ ವಿಧಿ ರದ್ದತಿಯನ್ನು ನಾನು ವಿರೋಧಿಸಿದರೆ ಅದು ಸಾರ್ವಜನಿಕ ಸುರಕ್ಷತೆಗೆ ಬೆದರಿಕೆ ಎಂದಾಗುತ್ತದೆಯೇ? ಈಗ ಎಲ್ಲರೂ ಸಂಘಟಿತರಾಗಿ ‘ಮೆಹಬೂಬ ಮುಫ್ತಿಯನ್ನು ಬಿಡುಗಡೆಗೊಳಿಸಿ’ ಎಂದು ಆಗ್ರಹಿಸುವ ಸಮಯ ಬಂದಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಮೆಹಬೂಬಾ ಮುಫ್ತಿ ಬಂಧನ ಅವಧಿ ವಿಸ್ತರಣೆ ನಂಬಲಾಗದಷ್ಟು ಕ್ರೂರ ಮತ್ತು ಪ್ರತಿಗಾಮಿ ಕ್ರಮವಾಗಿದೆ ಎಂದು ಮಾರ್ಚ್ ಅಂತ್ಯದಲ್ಲಿ ಬಂಧನದಿಂದ ಬಿಡುಗಡೆಗೊಂಡಿದ್ದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News