ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ: ಹಿಮಂತ, ಜ್ಯೋತಿರಾದಿತ್ಯ ಸೇರ್ಪಡೆ, ರಾಮಮಾಧವ್‌ಗೆ ಹಿಂಭಡ್ತಿ ನಿರೀಕ್ಷೆ

Update: 2020-08-01 16:42 GMT

ಹೊಸದಿಲ್ಲಿ, ಆ.1: ಒಂದು ವರ್ಷ ಪೂರೈಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಚಿವ ಸಂಪುಟವನ್ನು ಶೀಘ್ರ ವಿಸ್ತರಿಸುವ ಸಾಧ್ಯತೆಯ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ತಕ್ಷಣ ಮೋದಿ ಈ ಬಗ್ಗೆ ಗಮನ ಹರಿಸುವ ನಿರೀಕ್ಷೆಯಿದೆ ಎಂದು ಬಿಜೆಪಿಯ ಮೂಲಗಳನ್ನು ಉಲ್ಲೇಖಿಸಿ thewire.in ವರದಿ ಮಾಡಿದೆ.

ಸಂಪುಟ ವಿಸ್ತರಣೆ ಈ ಹಿಂದೆಯೇ ನಡೆಯಬೇಕಿತ್ತು. ಆದರೆ ಕೊರೋನ ಸೋಂಕಿನ ಸಮಸ್ಯೆಯಿಂದಾಗಿ ವಿಳಂಬವಾಗಿದೆ. ಆಗಸ್ಟ್ 5ರಿಂದ ಶ್ರಾವಣ ಮಾಸ ಆರಂಭವಾಗುವುದರಿಂದ ಸಂಪುಟ ವಿಸ್ತರಣೆಗೂ ಮುಹೂರ್ತ ಕೂಡಿ ಬರಲಿದೆ. ಜೊತೆಗೆ, ಪಕ್ಷದ ಸಂಘಟನೆಗೆ ನೇಮಿಸಲಾಗಿರುವ ಹಲವು ಆರೆಸ್ಸೆಸ್ ಮುಖಂಡರ ಬದಲಾವಣೆಯಾಗುವ ಸಾಧ್ಯತೆಯಿದೆ. ಈಶಾನ್ಯ ರಾಜ್ಯಗಳ ಉಸ್ತುವಾರಿ ಹುದ್ದೆಯಿಂದ ರಾಮಮಾಧವ್‌ರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ಹೇಳಿವೆ.

ಸಂಪುಟಕ್ಕೆ ಸೇರ್ಪಡೆಯಾಗಲಿರುವ ಸಂಭಾವ್ಯರ ಹೆಸರು ಈಗಾಗಲೇ ಮುನ್ನೆಲೆಗೆ ಬಂದಿದ್ದು, ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾಗಿರುವ ಜ್ಯೋತಿರಾದಿತ್ಯ ಸಿಂಧಿಯಾಗೆ ಅವಕಾಶ ಸಿಗುವುದು ಖಚಿತ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿದ್ದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರದ ಪತನದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಸಿಂಧಿಯಾಗೆ, ರಾಜ್ಯಸಭಾ ಸದಸ್ಯತ್ವದ ಜೊತೆಗೆ, ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನದ ಭರವಸೆಯನ್ನೂ ನೀಡಲಾಗಿತ್ತು. ಅಲ್ಲದೆ ಜ್ಯೋತಿರಾದಿತ್ಯ ಸಿಂಧಿಯಾರನ್ನು ರಾಜ್ಯ ರಾಜಕೀಯದಿಂದ ದೂರ ಇರಿಸುವ ಇರಾದೆಯನ್ನು ಹೊಂದಿರುವ ಮಧ್ಯಪ್ರದೇಶದ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಸಿಂಧಿಯಾಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.  ಜೊತೆಗೆ ಅಸ್ಸಾಂ ಬಿಜೆಪಿ ಮುಖಂಡ ಹಿಮಂತ ಬಿಸ್ವಾ ಶರ್ಮಾ ಅವರ ಸೇರ್ಪಡೆಯು ಖಚಿತ ಎಂದು ಹೇಳಲಾಗಿದೆ.

ಈಗ ಕೇಂದ್ರ ಸಂಪುಟದಲ್ಲಿ 57 ಸಚಿವರಿದ್ದಾರೆ. ಹಲವು ಸಚಿವರ ಬಳಿ ಎರಡು ಮೂರು ಖಾತೆಗಳಿದ್ದು ಸಂಪುಟಕ್ಕೆ ಇನ್ನೂ 14 ಸಚಿವರ ಸೇರ್ಪಡೆಗೆ ಅವಕಾಶವಿದೆ. ಕೇಂದ್ರ ಸಂಪುಟದಲ್ಲಿ ಈಗ ರಾಜಸ್ಥಾನದ ಮೂವರು ಸಚಿವರಿದ್ದು ಇದರಲ್ಲಿ ಒಬ್ಬರನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಐಎಎನ್‌ಎಸ್ ಜುಲೈ 10ರಂದು ವರದಿ ಮಾಡಿತ್ತು. ಗಜೇಂದ್ರ ಸಿಂಗ್ ಶೆಖಾವತ್ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರೆ, ಕೈಲಾಶ್ ಚೌಧರಿ ಮತ್ತು ಅರ್ಜುನ್ ರಾಮ್ ಮೆಘಾವಾಲ್ ಸಹಾಯಕ ಸಚಿವರಾಗಿದ್ದಾರೆ. ಈ ಮಧ್ಯೆ, ರಾಜಸ್ತಾನದ ಅಶೋಕ್ ಗೆಹ್ಲೋಟ್ ಸರಕಾರವನ್ನು ಉರುಳಿಸುವ ಷಡ್ಯಂತ್ರದಲ್ಲಿ ಗಜೇಂದ್ರ ಸಿಂಗ್ ಶೆಖಾವತ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ರಾಜಸ್ಥಾನ ಸರಕಾರ, ಅವರ ವಿರುದ್ಧ ತನಿಖೆಗೆ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ, ಜುಲೈ 10ರ ವರದಿಯ ಬಗ್ಗೆ ಕುತೂಹಲವಿದೆ.

ಮೋದಿ ಸರಕಾರ ಒಂದು ವರ್ಷ ಪೂರೈಸಿದ ಬೆನ್ನಲ್ಲೇ, ಕಳೆದ ಜೂನ್‌ನಲ್ಲಿ ಹಿರಿಯ ಆರೆಸ್ಸೆಸ್ ಮುಖಂಡ ಕೃಷ್ಣ ಗೋಪಾಲ್, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಂಘ ಪರಿವಾರದ ಉನ್ನತ ಮುಖಂಡ ದತ್ತಾತ್ರೇಯ ಹೊಸಬಾಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಸಂಪುಟ ವಿಸ್ತರಣೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ. ಆಗಸ್ಟ್ ಎರಡನೇ ವಾರದಲ್ಲಿ ಸಂಪುಟ ವಿಸ್ತರಣೆ ಬಹುತೇಕ ನಿಶ್ಚಿತ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್, ಅನಿಲ್ ಜೈನ್ ಹಾಗೂ ಅನಿಲ್ ಬಲೂನಿಯವರನ್ನು ಆರೆಸ್ಸೆಸ್ ಪ್ರತಿನಿಧಿಗಳಾಗಿ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದೂ ವರದಿ ತಿಳಿಸಿದೆ.

ಮಾಧವ್ ಹಿಂಭಡ್ತಿ ಬಹುತೇಕ ಖಚಿತ

ಆರೆಸ್ಸೆಸ್ ಮುಖಂಡ ರಾಮಮಾಧವ್‌ರನ್ನು ಈಶಾನ್ಯ ರಾಜ್ಯಗಳ ಉಸ್ತುವಾರಿ ಹುದ್ದೆಯಿಂದ ಕೆಳಗಿಳಿಸುವುದು ಬಹುತೇಕ ಖಚಿತ ಎಂದು ಆರೆಸ್ಸೆಸ್ ಮೂಲಗಳನ್ನು ಉಲ್ಲೇಖಿಸಿ thewire.in ವರದಿ ಮಾಡಿದೆ. ತಮ್ಮ ಪ್ರಭಾವವನ್ನು ಬಳಸಿಕೊಂಡ ರಾಮಮಾಧವ್, ತಮ್ಮ ‘ಇಂಡಿಯಾ ಫೌಂಡೇಷನ್’ನ ಹಲವು ಸದಸ್ಯರನ್ನು ಈಶಾನ್ಯ ರಾಜ್ಯಗಳ ಹಲವು ಮುಖ್ಯಮಂತ್ರಿಗಳ ಸಲಹೆಗಾರ ಅಥವಾ ರಾಜಕೀಯ ಸಲಹೆಗಾರ ಹುದ್ದೆಗಳಿಗೆ ನೇಮಿಸಿದ್ದಾರೆ. ಇವರಿಗೆ ಆಯಾ ಸರಕಾರದಿಂದ ಸಂಬಳ ಪಾವತಿಯಾಗುತ್ತದೆ. ತನ್ನ ಸಂಸ್ಥೆಗೆ ಲಾಭ ಮಾಡಿಕೊಡಲು ತನ್ನ ರಾಜಕೀಯ ಪ್ರಭಾವ ಬಳಸಿಕೊಂಡಿರುವ ರಾಮ ಮಾಧವ್ ಬಗ್ಗೆ ಆರೆಸ್ಸೆಸ್ ಅಸಮಾಧಾನ ಹೊಂದಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News