ಜಿಎಸ್‌ಟಿ ಪರಿಹಾರ: ಎಜಿ ಅಭಿಪ್ರಾಯದ ಬಗ್ಗೆ ಸಮಿತಿ ಸಭೆಯಲ್ಲಿ ಚರ್ಚೆ; ನಿರ್ಮಲಾ ಸೀತಾರಾಮನ್

Update: 2020-08-01 17:02 GMT

ಹೊಸದಿಲ್ಲಿ, ಆ.1: ಜಿಎಸ್‌ಟಿ ಪರಿಹಾರದ ವಿಷಯದಲ್ಲಿ ರಾಜ್ಯಗಳೊಂದಿಗೆ ಸಮಾಲೋಚಿಸಿದ ಬಳಿಕ ಅಟಾರ್ನಿ ಜನರಲ್ (ಎಜಿ) ಅಭಿಪ್ರಾಯ ಪಡೆಯಲಾಗಿದೆ. ಈ ಅಭಿಪ್ರಾಯದ ಬಗ್ಗೆ ಜಿಎಸ್‌ಟಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರದ ವಿಷಯದಲ್ಲಿ ಕೆಲವು ರಾಜ್ಯಗಳು ಎತ್ತಿರುವ ಆತಂಕದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಸಮಿತಿ ಮಾರ್ಚ್‌ನಲ್ಲಿ ನಡೆಸಿದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ಸಾಲ ಪಡೆದು ಪರಿಹಾರ ನಿಧಿಯಲ್ಲಿ ಇರುವ ಕೊರತೆಯನ್ನು ತುಂಬಿಸುವ ಬಗ್ಗೆ ಅಟಾರ್ನಿ ಜನರಲ್‌ರಿಂದ ಕಾನೂನು ಸಲಹೆ ಪಡೆಯಲು ನಿರ್ಧರಿಸಲಾಗಿತ್ತು. ಅವರ ಸಲಹೆಯ ಬಗ್ಗೆ ಜಿಎಸ್‌ಟಿ ಸಮಿತಿಯ ವಿಶೇಷ ಸಭೆಯಲ್ಲಿ ಚರ್ಚಿಸಲಾಗುವುದು . ಸಭೆಯ ದಿನಾಂಕವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಹೇಳಿದರು. ಜಿಎಸ್‌ಟಿ ಪರಿಹಾರ ಕೊರತೆಯ ಮೊತ್ತವನ್ನು ರಾಜ್ಯ ಸರಕಾರಗಳಿಗೆ ಭರ್ತಿ ಮಾಡಿಕೊಡುವುದು ಕೇಂದ್ರ ಸರಕಾರದ ಹೊಣೆಯಲ್ಲ. ಜಿಎಸ್‌ಟಿ ಪರಿಹಾರ ಕೊರತೆಯನ್ನು ಸರಿದೂಗಿಸುವ ಬಗ್ಗೆ ಜಿಎಸ್‌ಟಿ ಸಮಿತಿ ನಿರ್ಧರಿಸಬೇಕು ಎಂದು ಅಟಾರ್ನಿ ಜನರಲ್ ಅಭಿಪ್ರಾಯಪಟ್ಟಿರುವುದಾಗಿ ಮೂಲಗಳು ಹೇಳಿವೆ.

2019ರ ಆಗಸ್ಟ್‌ನಿಂದ ತೆರಿಗೆ ಸಂಗ್ರಹ ಇಳಿಮುಖವಾಗಿರುವುದು ಮತ್ತು 2017-18 ಹಾಗೂ 2018-19ರ ಅವಧಿಯಲ್ಲಿ ಸಂಗ್ರಹವಾದ ಹೆಚ್ಚುವರಿ ತೆರಿಗೆ ಮೊತ್ತದ ಹಂಚಿಕೆಯ ವಿಷಯವು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ವಿವಾದಕ್ಕೆ ಕಾರಣವಾಗಿದೆ. ಜಿಎಸ್‌ಟಿ ನಿಯಮದ ಪ್ರಕಾರ, ಜಿಎಸ್‌ಟಿ ನಿಯಮ ಜಾರಿಗೆ ಬಂದ (2017ರ ಜುಲೈ 1) ದಿನದಿಂದ ಮುಂದಿನ 5 ವರ್ಷದವರೆಗೆ ಅಗುವ ಯಾವುದೇ ತೆರಿಗೆ ಆದಾಯ ನಷ್ಟಕ್ಕೆ ರಾಜ್ಯಗಳಿಗೆ ಪರಿಹಾರ ನೀಡಬೇಕು. 2015-16ನ್ನು ಮೂಲ ವರ್ಷ ಎಂದು ಪರಿಗಣಿಸಿ, ಜಿಎಸ್‌ಟಿ ವಾರ್ಷಿಕ ಹೆಚ್ಚಳ 14% ಎಂದು ಲೆಕ್ಕಹಾಕಲಾಗುತ್ತದೆ. ಜಿಎಸ್‌ಟಿ ವ್ಯವಸ್ಥೆಯಡಿ ತೆರಿಗೆಯನ್ನು 5%, 12%, 18% ಮತ್ತು 28% ಎಂಬ ಹಂತದಲ್ಲಿ ವಿಧಿಸಲಾಗುತ್ತದೆ ಮತ್ತು ಅತ್ಯಂತ ಹೆಚ್ಚಿನ ತೆರಿಗೆ ಹಂತದಲ್ಲಿ ಐಶಾರಾಮಿ, ಅಪಾಯಕಾರಿ ಸರಕುಗಳ ಮೇಲೆ ಉಪತೆರಿಗೆ ವಿಧಿಸಲಾಗುತ್ತದೆ. ಈ ಉಪತೆರಿಗೆಯನ್ನು ರಾಜ್ಯಗಳಿಗೆ ಉಂಟಾಗುವ ತೆರಿಗೆ ಆದಾಯ ನಷ್ಟ ಪಾವತಿಸಲು ಬಳಸಲಾಗುವುದು. 2019-20ರಲ್ಲಿ ಕೇಂದ್ರ ಸರಕಾರ ಜಿಎಸ್‌ಟಿ ಪರಿಹಾರವಾಗಿ 1.65 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ಬಿಡುಗಡೆಗೊಳಿಸಿದೆ. ಆದರೆ ಈ ಅವಧಿಯಲ್ಲಿ ಸಂಗ್ರಹವಾದ ಉಪತೆರಿಗೆ 95,444 ಕೋಟಿ ರೂ. 2018-19ರಲ್ಲಿ ಮತ್ತು 2017-18ರಲ್ಲಿ ಪಾವತಿಸಬೇಕಾದ ಪರಿಹಾರ ಮೊತ್ತ ಕ್ರಮವಾಗಿ 69,275 ಕೋಟಿ ರೂ. ಮತ್ತು 41,146 ಕೋಟಿ ರೂ. ಎಂದು ಸರಕಾರದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News