ಸಾರ್ವಜನಿಕ ವಲಯದ ಸಂಸ್ಥೆಗಳ ನೀತಿ ಶೀಘ್ರ ನಿರ್ಧಾರ: ನಿರ್ಮಲಾ ಸೀತಾರಾಮನ್

Update: 2020-08-01 17:21 GMT

ಹೊಸದಿಲ್ಲಿ, ಆ. 1: ಕಾರ್ಯತಂತ್ರ ಕ್ಷೇತ್ರದಲ್ಲಿ ಗರಿಷ್ಠ ನಾಲ್ಕು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಿತಿಗೊಳಿಸುವ ನೂತನ ಸಾರ್ವಜನಿಕ ವಲಯದ ಸಂಸ್ಥೆಗಳ ನೀತಿಯ ಬಗ್ಗೆ ಕೇಂದ್ರ ಸರಕಾರ ಶೀಘ್ರ ನಿರ್ಧರಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ತಿಳಿಸಿದ್ದಾರೆ.

‘ಆತ್ಮ ನಿರ್ಭರ ಭಾರತ್ ಅಭಿಯಾನ’ದ ಪ್ಯಾಕೆಜ್‌ನ ಭಾಗವಾಗಿ ಹಣಕಾಸು ಸಚಿವೆ, ಕಾರ್ಯತಂತ್ರ ಕ್ಷೇತ್ರದಲ್ಲಿ ಗರಿಷ್ಠ ನಾಲ್ಕು ಸಾರ್ವಜನಿಕ ವಲಯದ ಸಂಸ್ಥೆಗಳು ಇರಲಿವೆ. ಅಲ್ಲದೆ, ಇನ್ನೊಂದೆಡೆ ರಾಜ್ಯ ಸ್ವಾಮಿತ್ವದ ಕಂಪನೆಗಳನ್ನು ಅಂತಿಮವಾಗಿ ಖಾಸಗೀಕರಣ ಗೊಳಿಸಲಾಗುವುದು ಎಂದು ಮೇಯಲ್ಲಿ ಹೇಳಿದ್ದರು. ಕಾರ್ಯತಂತ್ರ ಕ್ಷೇತ್ರದ ಪಟ್ಟಿ ಕುರಿತು ಮಾದ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘‘ನಾವು ಈ ಕುರಿತಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಅದು ಶೀಘ್ರ ಸಂಪುಟದ ಮುಂದೆ ಬರಬೇಕು’’ ಎಂದರು. ಕಾರ್ಯತಂತ್ರ ಕ್ಷೇತ್ರದಲ್ಲಿ ಕನಿಷ್ಠ ನಾಲ್ಕು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ತರಲು ವಿವಿಧ ಮಾದರಿಗಳು ಇರಬಹುದು ಎಂದು ಅವರು ಹೇಳಿದರು. ಖಾಸಗಿ ವಲಯದ ಸಂಸ್ಥೆಗಳನ್ನು ಒಂದೋ ವಿಲೀನಗೊಳಿಸಬೇಕು ಅಥವಾ ಅವುಗಳನ್ನು ಕೇವಲ ನಾಲ್ಕು ಅಥವಾ ಅದಕ್ಕಿಂತ ಕಡಿಮೆ ಇರುವ ರೀತಿಯಲ್ಲಿ ಒಟ್ಟುಗೂಡಿಸಬೇಕು ಎಂದು ಅವರು ಹೇಳಿದರು.

ಈ ನೀತಿಯ ಅಡಿಯಲ್ಲಿ ಖಾಸಗಿ ಕಂಪೆನಿಗಳನ್ನು ಹೊರತುಪಡಿಸಿ ಕನಿಷ್ಠ ಒಂದು ಮತ್ತು ಗರಿಷ್ಠ ನಾಲ್ಕು ಸಾರ್ವಜನಿಕ ವಲಯದ ಸಂಸ್ಥೆಗಳು ಇರುವ ಕಾರ್ಯತಂತ್ರ ಕ್ಷೇತ್ರದ ಪಟ್ಟಿಯ ಅಧಿಸೂಚನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಇತರ ವಲಯಗಳಲ್ಲಿ, ಕಾರ್ಯ ಸಾಧ್ಯತೆ ಅವಲಂಬಿಸಿ ಕೇಂದ್ರದ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಅವರು ತಿಳಿಸಿದರು. ಆತ್ಮ ನಿರ್ಭರ ಭಾರತಕ್ಕೆ ಅಗತ್ಯವಾದ ಸಾರ್ವಜನಿಕ ವಲಯದ ಉದ್ದಿಮೆ ನೀತಿಯನ್ನು ಘೋಷಿಸಲು ನಾವು ಬಯಸುತ್ತೇವೆ. ಎಲ್ಲ ವಲಯಗಳು ಖಾಸಗಿ ವಲಯಗಳಿಗೆ ತೆರೆದುಕೊಳ್ಳಲಿವೆ ಎಂದು ಅವರು ತಿಳಿಸಿದರು. ವ್ಯಾಖ್ಯಾನಿತ ಕ್ಷೇತ್ರದಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳು ಪ್ರಮುಖ ಪಾತ್ರವನ್ನು ಮುಂದುವರಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News