ಪಂಜಾಬ್‌ ಕಳ್ಳಭಟ್ಟಿ ದುರಂತ: 86ಕ್ಕೆ ಏರಿದ ಸಾವಿನ ಸಂಖ್ಯೆ; 7 ಅಬಕಾರಿ, 6 ಪೊಲೀಸ್ ಅಧಿಕಾರಿ ಅಮಾನತು

Update: 2020-08-01 19:06 GMT

ಚಂಡಿಗಢ, ಆ. 1: ಪಂಜಾಬ್‌ನಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ ಶನಿವಾರ ಮತ್ತೆ 48 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 7 ಮಂದಿ ಅಬಕಾರಿ ಅಧಿಕಾರಿಗಳು ಹಾಗೂ 6 ಮಂದಿ ಪೊಲೀಸರನ್ನು ಅಮಾನತುಗೊಳಿಸಿದೆ. ಅಮಾನತುಗೊಂಡ ಅಧಿಕಾರಿಗಳಲ್ಲಿ ಇಬ್ಬರು ಡಿಜಿಪಿಗಳು ಹಾಗೂ ನಾಲ್ವರು ಠಾಣಾಧಿಕಾರಿಗಳು ಸೇರಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಬುಧವಾರದಿಂದ ತರನ್‌ತರನ್ ಜಿಲ್ಲೆಯಲ್ಲಿ 63 ಮಂದಿ, ಅಮೃತಸರದಲ್ಲಿ 12 ಮಂದಿ ಹಾಗೂ ಬಾಟಾಲದ ಗುರುದಾಸ್‌ಪುರದಲ್ಲಿ 11 ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೃತಸರದ ಮುಚ್ಚಾಲ್ ಗ್ರಾಮದಲ್ಲಿ ಬುಧವಾರ ಸಂಜೆ ಮೊದಲ ಸಾವು ವರದಿಯಾಗಿದೆ. ಶುಕ್ರವಾರ ರಾತ್ರಿವರೆಗೆ 38 ಜನರು ಮೃತಪಟ್ಟಿದ್ದರು. ಶನಿವಾರ ರಾತ್ರಿ ವರಗೆ ಮತ್ತೆ 48 ಜನರು ಮೃತಪಟ್ಟರು. ಕಳ್ಳಭಟ್ಟಿ ಸಾರಾಯಿ ಸೇವಿಸಿ ಆಸ್ಪತ್ರೆಯಲ್ಲಿ ಇದುವರೆಗೆ ಎಷ್ಟು ಮಂದಿ ದಾಖಲಾಗಿದ್ದಾರೆ ಎಂಬುದನ್ನು ಚಂಡಿಗಢದ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.

ಕಳ್ಳಭಟ್ಟಿ ದುರಂತಕ್ಕೆ ಕಾರಣಾದವರನ್ನು ಬಂಧಿಸಲು ಪೊಲೀಸರು ಹಲವು ದಾಳಿಗಳನ್ನು ನಡೆಸಿದ್ದಾರೆ. ಶುಕ್ರವಾರ 8 ಮಂದಿಯನ್ನು ಬಂಧಿಸಿದ ಬಳಿಕ ಶನಿವಾರದ ವರೆಗೆ ಮೂರು ಜಿಲ್ಲೆಗಳ 100 ಸ್ಥಳಗಳು ಹಾಗೂ ಇತರ ಸ್ಥಳಗಳಿಗೆ ದಾಳಿ ಮಾಡಿ 17ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News