ಕೊರೋನ ವೈರಸ್ ಸಾಂಕ್ರಾಮಿಕ ಸುದೀರ್ಘ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Update: 2020-08-02 03:46 GMT

ಜಿನೀವಾ: ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿರುವ ಕೊರೋನ ವೈರಸ್ ಸಾಂಕ್ರಾಮಿಕ ಸುದೀರ್ಘ ಅವಧಿಯದ್ದಾಗಿರುವ ನಿರೀಕ್ಷೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಈ ವೈರಸ್ ಸೋಂಕು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಉಂಟುಮಾಡಿದ ಆರು ತಿಂಗಳ ಬಳಿಕ ನಡೆದ ತುರ್ತು ಸಮಿತಿ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಈ ಸಾಂಕ್ರಾಮಿಕ ಸುಧೀರ್ಘ ಅವಧಿಯದ್ದಾಗಿರುವ ನಿರೀಕ್ಷೆ ಇದ್ದು, ದೇಶಗಳ ಮೇಲಿರುವ ಸಾಮಾಜಿಕ, ಆರ್ಥಿಕ ಒತ್ತಡದಿಂದಾಗಿ ಸ್ಪಂದನೆ ನೀರಸವಾಗಲಿದೆ ಎಂದು ಎಚ್ಚರಿಸಿದೆ.

ಕಳೆದ ಜನವರಿ 30ರಂದು ಕೊರೋನ ವೈರಸ್ ಸಾಂಕ್ರಾಮಿಕವನ್ನು ಅಂತರ್ ರಾಷ್ಟ್ರೀಯ ಕಳವಳದ ತುರ್ತು ಆರೋಗ್ಯ ಪರಿಸ್ಥಿತಿ ಎಂದು ಘೋಷಿಸಿದ ಬಳಿಕ ಕೊರೋನ ವೈರಸ್ ಸಾಂಕ್ರಾಮಿಕದ ಬಗ್ಗೆ ಸಮಿತಿ ನಾಲ್ಕನೇ ಸಭೆ ನಡೆಸಿದೆ. ಕೋವಿಡ್-19ನಿಂದಾಗಿ ಜಾಗತಿಕ ಅಪಾಯ ಸಾಧ್ಯತೆ ಗರಿಷ್ಠಮಟ್ಟದಲ್ಲೇ ಇದೆ ಎಂದು ಸಭೆಯ ಬಳಿಕ ಹೇಳಿಕೆ ನೀಡಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಬಳಿಕ ಈ ಮಾರಕ ಸೋಂಕು 6.80 ಲಕ್ಷ ಮಂದಿಯನ್ನು ಬಲಿ ಪಡೆದಿದ್ದು, 1.76 ಕೋಟಿ ಮಂದಿಗೆ ಸೋಂಕು ತಗುಲಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ 17 ಮಂದಿ ಸದಸ್ಯರ ಪೈಕಿ 12 ಮಂದಿ, ಸಾಂಕ್ರಾಮಿಕದಿಂದ ಗರಿಷ್ಠ ಅಪಾಯ ಸಾಧ್ಯತೆ ಪರಿಸ್ಥಿತಿ ಮುಂದುವರಿದಿರುವುದಕ್ಕೆ ಒಮ್ಮತ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News