ರಾಮಮಂದಿರ ಶಿಲಾನ್ಯಾಸ: ಅಮೆರಿಕದಲ್ಲಿ ಪ್ರಚಾರಕ್ಕೆ ವ್ಯಾಪಕ ವಿರೋಧ

Update: 2020-08-02 04:48 GMT
Photo: Twitter/Clovos25

ನ್ಯೂಯಾರ್ಕ್: ಹಿಂದೂಗಳ ಆರಾಧ್ಯದೈವ ರಾಮನ ಚಿತ್ರಗಳು ಹಾಗೂ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಮಮಂದಿರದ 3-ಡಿ ಚಿತ್ರಗಳನ್ನು ಟೈಮ್ಸ್ ಸ್ಕ್ವೇರ್‍ನಲ್ಲಿ ಆಗಸ್ಟ್ 5ರಂದು ಪ್ರದರ್ಶಿಸುವುದನ್ನು ವಿರೋಧಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಪ್ರಮುಖರು ನ್ಯೂಯಾರ್ಕ್ ಮೇಯರ್ ಬಿಲ್ ಡೆ ಬ್ಲಾಸಿಯೊ ಅವರಿಗೆ ಪತ್ರ ಬರೆದಿದ್ದಾರೆ.

“ನ್ಯೂಯಾರ್ಕ್‍ನಲ್ಲಿರುವ ಮುಸ್ಲಿಮರ ವಿರುದ್ಧ ದ್ವೇಷ ಪ್ರಸರಿಸುವ ದೃಷ್ಟಿಯಿಂದ ಮತ್ತು ಭಾರತದಲ್ಲಿ ಮುಸ್ಲಿಮರ ವಿರುದ್ಧದ ಮಾನವಹಕ್ಕುಗಳನ್ನು ಉಲ್ಲಂಘಿಸಿದ್ದನ್ನು ಸಂಭ್ರಮಿಸುವ ಇಸ್ಲಾಮೋಫೋಬಿಕ್ ಬಿಲ್‍ಬೋರ್ಡ್‍ಗಳನ್ನು ಟೈಮ್ಸ್ ಸ್ಕ್ವೇರ್‍ನಲ್ಲಿ ಪ್ರದರ್ಶಿಸಲಾಗುತ್ತಿದೆ ಎನ್ನುವುದನ್ನು ಈ ಪತ್ರದ ಮೂಲಕ ನಿಮ್ಮ ಗಮನಕ್ಕೆ ತರುತ್ತಿದ್ದೇವೆ” ಎಂದು ಹೇಳಿದ್ದಾರೆ.

“ಭಾರತದಲ್ಲಿ ಅಧಿಕಾರಾರೂಢ ಬಿಜೆಪಿಯ ಬಲಪಂಥೀಯ ಹಿಂದುತ್ವದ ರಾಷ್ಟ್ರೀಯತೆಯನ್ನು ನಮ್ಮ ಒಕ್ಕೂಟವು ವಿರೋಧಿಸುತ್ತದೆ. ಬಹುಪಂಥೀಯ ಮೌಲ್ಯಗಳನ್ನು ಒಳಗೊಂಡ ನ್ಯೂಯಾರ್ಕ್ ಪಟ್ಟಣದಲ್ಲಿ ಇಂಥ ದ್ವೇಷಪೂರಿತ ಹಾಗೂ ಇಸ್ಲಾಮೋಫೋಬಿಯಾಗೆ ಹೇಗೆ ಅವಕಾಶ ನೀಡಲಾಗುತ್ತಿದೆ ಎನ್ನುವುದನ್ನು ನಾವು ಪ್ರಶ್ನಿಸುತ್ತಿದ್ದೇವೆ” ಎಂದು ವಿವರಿಸಲಾಗಿದೆ.

ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಅಂಡ್ ಕೋಯಿಲೇಶನ್ ಅಗನೆಸ್ಟ್ ಫ್ಯಾಸಿಸಂ ಆಫ್ ಇಂಡಿಯಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಪತ್ರಕ್ಕೆ ಸಹಿ ಮಾಡಿದ್ದಾರೆ. 

425 ವರ್ಷ ಹಳೆಯ ಮಸೀದಿಯನ್ನು ಕೆಡವಿದ್ದನ್ನು ಸಂಭ್ರಮಿಸುವ ಬಿಲ್‍ಬೋರ್ಡ್‍ಗಳನ್ನು ಟೈಮ್ಸ್ ಸ್ಕ್ವೇರ್‍ನಲ್ಲಿ ಆಗಸ್ಟ್ 5ರಂದು ಪ್ರದರ್ಶಿಸುವ ಅಮೆರಿಕನ್ ಇಂಡಿಯನ್ ಪಬ್ಲಿಕ್ ಅಫೇರ್ಸ್ ಕಮಿಟಿ ಕ್ರಮವನ್ನು ನಾವು ಖಂಡಿಸುತ್ತೇವೆ. ಈ ಘಟನೆ ಭಾರತದಲ್ಲಿ ಕರಾಳ ಕೋಮು ಗಲಭೆಗೆ ಕಾರಣವಾಗಿ ಮೂರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿತ್ತು ಎಂದು ನೆನಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News