ಕಳೆದ 10 ತಿಂಗಳುಗಳಿಂದ ಆಟಗಾರರಿಗೆ ಸಂಬಳ ಬಾಕಿ ಇಟ್ಟಿರುವ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ

Update: 2020-08-02 10:50 GMT

ಹೊಸದಿಲ್ಲಿ, ಆ.2: ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿರುವ ಬಿಸಿಸಿಐ ಕಳೆದ 10 ತಿಂಗಳುಗಳಿಂದ ತನ್ನ ಕೆಲವು  ಸ್ಟಾರ್ ಆಟಗಾರರಿಗೆ ವೇತನ ಪಾವತಿಸದೇ ಬಾಕಿ ಇಟ್ಟಿದೆ ಎಂಬ ವಿಚಾರ ವರದಿಯಾಗಿದೆ.

ಬಿಸಿಸಿಐನ 27 ಎಲೈಟ್ ಗುತ್ತಿಗೆ ಆಟಗಾರರು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಪಡೆಯಬೇಕಾಗಿದ್ದ ಮೊದಲ ತ್ರೈಮಾಸಿಕ ಕಂತಿನ ಮೊತ್ತವನ್ನು ಇನ್ನೂ ಪಡೆದಿಲ್ಲ. 2019ರ ಡಿಸೆಂಬರ್ ನಲ್ಲಿ 2 ಟೆಸ್ಟ್, 9 ಏಕದಿನ ಹಾಗೂ 8 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಟೀಮ್ ಇಂಡಿಯಾದ ಆಟಗಾರರಿಗೂ ಬಿಸಿಸಿಐ ಪಂದ್ಯದ ಶುಲ್ಕವನ್ನು ಈ ತನಕ ಪಾವತಿಸಿಲ್ಲ. ಬಿಸಿಸಿಐ ಕಳೆದ 10 ತಿಂಗಳುಗಳಿಂದ ಸ್ಟಾರ್ ಆಟಗಾರರಿಗೆ ವೇತನ ಪಾವತಿಸಿಲ್ಲ ಎಂದು 8 ಗುತ್ತಿಗೆ ಕ್ರಿಕೆಟಿಗರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ವೇತನವನ್ನು ಇನ್ನೂ ನಗದೀಕರಿಸಲಾಗಿಲ್ಲ. ಈ  ಕುರಿತು ಬಿಸಿಸಿಐ ಖಜಾಂಚಿ ಅರುಣ್  ಧುಮಾಲ್ ಪ್ರತಿಕ್ರಿಯಿಸುತ್ತಿಲ್ಲ. ಕ್ರಿಕೆಟ್ ಮಂಡಳಿ ಯಲ್ಲಿ ಡಿಸೆಂಬರ್ ನಿಂದೆಚೆಗೆ ಮುಖ್ಯ ಹಣಕಾಸು ಅಧಿಕಾರಿ ಇಲ್ಲ. ಕಳೆದ ತಿಂಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜನರಲ್ ಮ್ಯಾನೇಜರ್ ಕೂಡ ಇಲ್ಲ. 
ಎ ದರ್ಜೆಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್‍ಪ್ರೀತ್ ಬುಮ್ರಾ ವರ್ಷಕ್ಕೆ 7 ಕೋ.ರೂ., ಎ,ಬಿ,ಸಿ ದರ್ಜೆಯ ಆಟಗಾರರು ವಾರ್ಷಿಕವಾಗಿ ಕ್ರಮವಾಗಿ 5 ಕೋ.ರೂ., 3 ಕೋ.ರೂ. ಹಾಗೂ 1 ಕೋ.ರೂ. ಸ್ವೀಕರಿಸುತ್ತಾರೆ. ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‍ನ ಪಂದ್ಯ  ಶುಲ್ಕ ಕ್ರಮವಾಗಿ 15 ಲಕ್ಷ, 6 ಲಕ್ಷ ಹಾಗೂ 3 ಲಕ್ಷ ರೂ. ನೀಡಲಾಗುತ್ತದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News