ತಮಿಳುನಾಡಿನ ಕುಡ್ಡಲೂರಿನಲ್ಲಿ ಮೀನುಗಾರನ ಹತ್ಯೆ: ಭುಗಿಲೆದ್ದ ಹಿಂಸಾಚಾರ,43 ಜನರ ಬಂಧನ

Update: 2020-08-02 17:35 GMT

ಚೆನ್ನೈ,ಆ.2: ಕುಡ್ಡಲೂರು ಜಿಲ್ಲೆಯ ಸಮುದ್ರ ತಟದ ಥಳಂಗುಡ ಗ್ರಾಮದಲ್ಲಿ ಶನಿವಾರ ರಾತ್ರಿ ಮೀನುಗಾರನೋರ್ವನನ್ನು ದುಷ್ಕರ್ಮಿಗಳ ಗುಂಪು ಹತ್ಯೆ ಮಾಡಿದ ಬಳಿಕ ವ್ಯಾಪಕ ಹಿಂಸಾಚಾರ ನಡೆದಿದ್ದು,ಹಲವಾರು ಮೀನುಗಾರಿಕೆ ದೋಣಿಗಳು.ದ್ವಿಚಕ್ರವಾಹನಗಳು ಮತ್ತು ಕಾರುಗಳು ಬೆಂಕಿಗಾಹುತಿಯಾಗಿವೆ. ಘಟನೆಗೆ ಸಂಬಂಧಿಸಿದಂತೆ 43 ಜನರನ್ನು ಪೊಲೀಸರು ಬಂಧಿಸಿದ್ದಾರೆ.

 ಮಾಜಿ ಪಂಚಾಯತ್ ಅಧ್ಯಕ್ಷ ಮಸಿಲಮಣಿ ಅವರ ಸೋದರ ಮದಿವಾನನ್ (36) ಕೊಲೆಯಾಗಿರುವ ವ್ಯಕ್ತಿ. ಶನಿವಾರ ರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ಕುಡ್ಡಲೂರಿನಿಂದ ಥಳಂಗುಡಕ್ಕೆ ಮರಳುತ್ತಿದ್ದ ಮದಿವಾನನ್‌ರನ್ನು ಅಡ್ಡಗಟ್ಟಿದ ಗುಂಪು ಅವರನ್ನು ಹತ್ಯೆಗೈದಿದೆ. ಇದರಿಂದ ಆಕ್ರೋಶಗೊಂಡ ಬೆಂಬಲಿಗರು ಹಿಂಸಾತ್ಮಕ ಘರ್ಷಣೆಗಳಲ್ಲಿ ತೊಡಗಿದ್ದು,ಕನಿಷ್ಠ 20 ಮೀನುಗಾರಿಕೆ ದೋಣಿಗಳು,ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಸುಟ್ಟುಹಾಕಿದ್ದಾರೆ. ದುಷ್ಕರ್ಮಿಗಳು ಮನೆಗಳಿಗೂ ನುಗ್ಗಿ ದಾಂಧಲೆ ನಡೆಸಿದ್ದು,ಕೆಲವು ಮನೆಗಳಿಗೆ ಬೆಂಕಿಯನ್ನೂ ಹಚ್ಚಿದ್ದಾರೆ ಎನ್ನಲಾಗಿದೆ.

 ಮಸಿಲಮಣಿ ಮತ್ತು ಪಂಚಾಯತ್‌ನ ಹಾಲಿ ಅಧ್ಯಕ್ಷರ ಕುಟುಂಬಗಳ ನಡುವಿನ ದೀರ್ಘಕಾಲದ ರಾಜಕೀಯ ದ್ವೇಷವು ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಪಂಚಾಯತ್ ಚುನಾವಣೆ ನಡೆದ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ಮನೆಮಾಡಿದ್ದು,ಪೊಲೀಸರು ಉಭಯ ಗುಂಪುಗಳ ಸದಸ್ಯರ ವಿರುದ್ಧ ಸಿಪಿಸಿಯ ಕಲಂ 107ನ್ನು ಹೇರಿದ್ದರು.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು,ಪರಿಸ್ಥಿತಿ ನಿಯಂತ್ರಣದಲ್ಲಿದೆ.

                       

                                    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News