×
Ad

ನಾಣ್ಯ ನುಂಗಿ ಚಿಕಿತ್ಸೆ ದೊರೆಯದೆ 3 ವರ್ಷದ ಮಗು ಸಾವು

Update: 2020-08-02 20:47 IST

ಕೊಚ್ಚಿ, ಆ. 2: ಕಂಟೈನ್ಮೆಂಟ್ ವಲಯದಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಾಣ್ಯ ನುಂಗಿದ ಮೂರು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಕೊಚ್ಚಿಯಲ್ಲಿ ನಡೆದಿದೆ.

ಮೃತಪಟ್ಟ ಮಗು ಕೊಚ್ಚಿ ಸಮೀಪದ ಆಲುವಾದ ಪೃಥ್ವಿರಾಜ್ ಹಾಗೂ ನಂದಿನಿ ಅವರ ಏಕೈಕ ಪುತ್ರನಾಗಿದ್ದಾನೆ. ಮನೆಯಲ್ಲಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬಾಲಕ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಾಣ್ಯ ನುಂಗಿದ್ದಾನೆ. ಕೂಡಲೇ ಆತನನ್ನು ಆಲುವಾದಲ್ಲಿರುವ ಜಿಲ್ಲಾ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಇಲ್ಲಿ ಮಕ್ಕಳ ವಿಭಾಗ ಇಲ್ಲ. ಆದುದರಿಂದ ಎರ್ನಾಕುಳಂ ಜನರಲ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದರು. ಆದರೆ, ಅಲ್ಲಿನ ವೈದ್ಯರು ಆಲುಪ್ಪುಳದಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ.

  ‘‘ಆಲುಪ್ಪುಳದಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ವೈದ್ಯರು ಬಾಲಕನಿಗೆ ಹಣ್ಣು ಹಾಗೂ ಅನ್ನ ನೀಡಿ. ನಾಣ್ಯ ನೈಸರ್ಗಿಕವಾಗಿ ಹೊರಗೆ ಬರುತ್ತದೆ ಎಂದು ಸಲಹೆ ನೀಡಿದ್ದರು. ಮಗುವನ್ನು ಮನೆಗೆ ಹಿಂದೆ ಕರೆ ತಂದೆವು. ಆದರೆ, ಶನಿವಾರ ರಾತ್ರಿ ಮಗು ಅಸ್ವಸ್ಥವಾಯಿತು. ಆರೋಗ್ಯ ಸ್ಥಿತಿ ಗಂಭೀರವಾಯಿತು. ಕೂಡಲೇ ಮಗುವನ್ನು ಆಲುವಾ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದೆವು. ಆದರೆ, ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯಿತು ಎಂದು ದಂಪತಿ ಹೇಳಿದ್ದಾರೆ.

ಮೂರು ಆಸ್ಪತ್ರೆಗಳಲ್ಲಿ ಮಗುವನ್ನು ದಾಖಲಿಸಿಕೊಳ್ಳಲು ನಿರಾಕರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

‘‘ಕಂಟೈನ್ಮೆಂಟ್ ವಲಯದಿಂದ ಬಂದ ಕಾರಣಕ್ಕೆ ಮಗುವನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲೆಂದು ಆಲಪ್ಪುಳ ಆಸ್ಪತ್ರೆಯ ವೈದ್ಯರು ತಿಳಿಸಿದರು. ಅಲ್ಲಿಂದ ಮನೆಗೆ ಹಿಂದಿರುಗಿದೆವು. ರಾತ್ರಿ ಮಗು ಅಸ್ವಸ್ಥಗೊಂಡಿತು ಹಾಗೂ ಅಳಲು ಆರಂಭಿಸಿತು’’ ಎಂದು ನಂದಿನಿ ಹೇಳಿದ್ದಾರೆ.

‘‘ಎಕ್ಸ್ ರೇ ತೆಗೆಯಲಾಗಿತ್ತು. ನಾಣ್ಯ ಮಗುವಿನ ಹೊಟ್ಟೆಯಲ್ಲಿ ಪತ್ತೆಯಾಗಿತ್ತು. ಅದರಿಂದ ಜೀವಕ್ಕೆ ಅಪಾಯ ಇರಲಿಲ್ಲ. ಮಗುವಿಗೆ ಉಸಿರಾಟದ ಯಾವುದೇ ತೊಂದರೆ ಇರಲಿಲ್ಲ. ಆಸ್ಪತ್ರೆಯಲ್ಲಿ ಮಕ್ಕಳ ಸರ್ಜನ್ ಇಲ್ಲದೇ ಇರುವುದರಿಂದ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಂತೆ ನಾವು ಹೇಳಿದೆವು. ಹತ್ತಿರವಾದುದರಿಂದ ಆಲಪ್ಪುಳ ವೈದ್ಯಕೀಯ ಕಾಲೇಜಿಗೆ ಹೋಗುವುದಾಗಿ ಅವರು ತಿಳಿಸಿದರು. ಅದಕ್ಕಾಗಿ ನಾವೇ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಕೊಟ್ಟೆವು’’ ಎಂದು ಎರ್ನಾಕುಳಂ ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎ. ಅನಿತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News