ರಕ್ಷಾ ಬಂಧನದ ಸಂದರ್ಭ ಸಿಹಿತಿಂಡಿ ಉದ್ಯಮಕ್ಕೆ 5,000 ಕೋ. ರೂ. ನಷ್ಟ ಸಾಧ್ಯತೆ: ಅಸೋಸಿಯೇಶನ್

Update: 2020-08-02 17:13 GMT
Photo: PTI

 ಇಂದೋರ್, ಆ. 2: ಕೊರೋನ ಸಾಂಕ್ರಾಮಿಕ ರೋಗದ ಕಾರಣಕ್ಕೆ ಈ ಬಾರಿಯ ರಕ್ಷಾ ಬಂಧನದ ಸಂದರ್ಭ ದೇಶದ ಸಿಹಿ ತಿಂಡಿ ಉದ್ಯಮಕ್ಕೆ ಅಂದಾಜು 5,000 ಕೋಟಿ ರೂಪಾಯಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಇಂಡಸ್ಟ್ರಿ ಅಸೋಸಿಯೇಶನ್ ಹೇಳಿದೆ.

ಕೊರೋನ ಬಿಕ್ಕಟ್ಟಿಗೆ ಗ್ರಾಹಕರು ಒಳಗಾಗಿರುವುದಲ್ಲದೆ, ವಿವಿಧ ರಾಜ್ಯಗಳ ಆಡಳಿತದ ದೋಷಪೂರಿತ ನಿರ್ವಹಣೆಯಿಂದ ರಕ್ಷಾ ಬಂಧನದ ಸಂದರ್ಭ ಸಿಹಿ ತಿಂಡಿ ಮಾರಾಟ ಅರ್ಧಕ್ಕೆ ಇಳಿಯುವ ಸಾಧ್ಯತೆ ಇದೆ. ಇದರಿಂದ ಸಿಹಿ ತಿಂಡಿ ಉದ್ಯಮಕ್ಕೆ 5,000 ಕೋಟಿ ರೂಪಾಯಿ ನಷ್ಟವಾಗುವ ಸಾಧ್ಯತೆ ಇದೆ ಎಂದು ನ್ಯಾಷನಲ್ ಫೆಡರೇಶನ್ ಆಫ್ ಸ್ವೀಟ್ ಮೇಕರ್ಸ್ ಹೇಳಿದೆ.

 ‘‘ದೇಶದಲ್ಲಿ ಕಳೆದ ವರ್ಷ ರಕ್ಷಾಬಂಧನದ ಸಂದರ್ಭ 10,000 ಕೋಟಿ ರೂಪಾಯಿಯ ಸಿಹಿ ತಿಂಡಿ ಮಾರಾಟವಾಗಿದೆ. ಈ ಬಾರಿ 5,000 ಕೋಟಿ ರೂಪಾಯಿ ನಷ್ಟವಾಗುವ ಸಾಧ್ಯತೆ ಇದೆ’’ ಎಂದು ಫೆಡರೇಶನ್ ಆಫ್ ಸ್ವೀಟ್ಸ್ ಆ್ಯಂಡ್ ನಾಮ್‌ಕೀನ್ ಮ್ಯಾನುಫ್ಯಾಕ್ಟರರ್‌ನ ನಿರ್ದೇಶಕ ಫಿರೋಝ್ ಎಚ್. ನಕ್ವಿ ಹೇಳಿದ್ದಾರೆ.

‘‘ಕೊರೋನ ವೈರಸ್ ಹರಡುತ್ತಿರುವುದರಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಗ್ರಾಹಕರ ಖರೀದಿ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ. ಸೋಮವಾರ ರಕ್ಷಬಂಧನ. ಅಂದರ ಹಿಂದಿನ ದಿನಗಳಾದ ಶನಿವಾರ ಹಾಗೂ ರವಿವಾರ ಸಿಹಿತಿಂಡಿ ಅಂಗಡಿಗಳು ತೆರೆಯುವ ಬಗ್ಗೆ ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಇತರ ಕೆಲವು ಪ್ರದೇಶಗಳ ಹಲವು ಜಿಲ್ಲೆಗಳಲ್ಲಿ ಗೊಂದಲ ಇದೆ’’ ಎಂದು ಅವರು ಹೇಳಿದ್ದಾರೆ.

 ರಕ್ಷಾ ಬಂಧನ ದಿನದ ಕುರಿತು ಸರಕಾರದ ದೋಷ ಪೂರಿತ ನಿರ್ವಹಣೆ ಸಿಹಿತಿಂಡಿ ಉದ್ಯಮದ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ಅಂಗಡಿಗಳನ್ನು ತೆರೆಯುವ ಬಗ್ಗೆ ಆಡಳಿತ ಸಕಾಲದಲ್ಲಿ ನಿರ್ಧರಿಸುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ನಕ್ವಿ ಹೇಳಿದ್ದಾರೆ.

ಸ್ಥೂಲ ಅಂದಾಜಿನ ಪ್ರಕಾರ ರಕ್ಷಾ ಬಂಧನದಿಂದ ಶ್ರೀಕೃಷ್ಣ ಜನ್ಮಾಷ್ಠಮಿ ವರೆಗಿನ ಸಿಹಿತಿಂಡಿ ಮಾರಾಟ ವಾರ್ಷಿಕ ಮಾರಾಟದ ಶೇ. 25 ಆಗಿದೆ ಎಂದು ಫಿರೋಝ್ ಎಚ್. ನಕ್ವಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News