ಕೊರೋನ ವೈರಸ್: ಸುಳ್ಳು ನೆಗೆಟಿವ್ ವರದಿ ಪಡೆದಿದ್ದ ವ್ಯಕ್ತಿಯ ಸಾವು; ಮೂವರ ಬಂಧನ

Update: 2020-08-02 17:28 GMT

ಕೋಲ್ಕತಾ,ಆ.2: ಸುಳ್ಳು ನೆಗೆಟಿವ್ ವರದಿಯನ್ನು ಸ್ವೀಕರಿಸಿದ್ದ ಬ್ಯಾಂಕ್ ಮ್ಯಾನೇಜರ್‌ವೋರ್ವರು ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ರೋಗನಿರ್ಣಯ ಲ್ಯಾಬ್‌ಗಳಿಂದ ಸ್ಯಾಂಪಲ್ ಸಂಗ್ರಹ ಏಜೆಂಟ್‌ಗಳೆಂಬ ಸೋಗು ಹಾಕಿದ್ದಕ್ಕಾಗಿ ಮೂವರನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಇತರರನ್ನೂ ವಂಚಿಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತ ಬಿಮಲ್ ಸಿನ್ಹಾ ಅವರ ಪತ್ನಿ ಸಲ್ಲಿಸಿರುವ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಜ್ವರ ಮತ್ತು ಉಸಿರಾಟ ತೊಂದರೆಯ ಹಿನ್ನೆಲೆಯಲ್ಲಿ ಸಿನ್ಹಾ ಜು.20ರಂದು ವೈದ್ಯರನ್ನು ಭೇಟಿಯಾಗಿದ್ದರು. ಅವರು ಖುದ್ದಾಗಿ ಲ್ಯಾಬ್‌ಗೆ ತೆರಳುವ ಸ್ಥಿತಿಯಲ್ಲಿರದ್ದರಿಂದ ವೈದ್ಯರು ಅವರ ಮನೆಯಿಂದಲೇ ಕೊರೋನ ವೈರಸ್ ಪರೀಕ್ಷೆಗಾಗಿ ಗಂಟಲು ದ್ರವ ಮತ್ತು ರಕ್ತದ ಸ್ಯಾಂಪಲ್ ಸಂಗ್ರಹಕ್ಕೆ ವ್ಯವಸ್ಥೆ ಮಾಡಿದ್ದರು.

ಸಿನ್ಹಾರ ಕುಟುಂಬ ವೈದ್ಯರು ಸೂಚಿಸಿದ್ದ ಲ್ಯಾಬ್‌ನ್ನು ಸಂಪರ್ಕಿಸಿದಾಗ ಅದರ ಮಾಲಿಕ ಸ್ಯಾಂಪಲ್‌ಗಳನ್ನು ಸಂಗ್ರಹಿಸಲು ಜು.25ರಂದು ಯುವಕನೋರ್ವನನ್ನು ಮನೆಗೆ ಕಳುಹಿಸಿದ್ದ ಮತ್ತು ಸಿನ್ಹಾರ ಪರೀಕ್ಷಾ ವರದಿ ನೆಗೆಟಿವ್ ಆಗಿದೆ ಎಂದು ಮರುದಿನ ದೂರವಾಣಿ ಮೂಲಕ ತಿಳಿಸಲಾಗಿತ್ತು. ವಿಧ್ಯುಕ್ತವಾದ ವರದಿಗಾಗಿ ಕುಟುಂಬವು ಆಗ್ರಹಿಸಿದಾಗ ಯುವಕನ ಸೋದರ ಕೈಬರಹದ ವರದಿಯನ್ನು ವಾಟ್ಸ್‌ಆ್ಯಪ್ ಮೂಲಕ ರವಾನಿಸಿದ್ದ.

ಮುಂದಿನ ಕೆಲವು ದಿನಗಳಲ್ಲಿ ಸಿನ್ಹಾರ ಸ್ಥಿತಿ ಹದಗೆಟ್ಟಿದ್ದು,ಜು.27ರಂದು ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ನಡೆಸಿದಾಗ ಅವರು ‘ವೈರಲ್ ನ್ಯುಮೋನಿಯಾ’ದಿಂದ ಬಳಲುತ್ತಿದ್ದುದು ಬೆಳಕಿಗೆ ಬಂದಿತ್ತು. ಅವರಲ್ಲಿ ಶೇ.99ರಷ್ಟು ಕೊರೋನ ವೈರಸ್ ಲಕ್ಷಣಗಳಿವೆ ಎಂದು ದೃಢ ಪಡಿಸಿದ್ದ ವೈದ್ಯರು ಕೋವಿಡ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಆದರೆ ಕುಟುಂಬದ ಬಳಿ ನೆಗೆಟಿವ್ ವರದಿಯಿದ್ದರಿಂದ ಹಲವಾರು ಆಸ್ಪತ್ರೆಗಳು ಸಿನ್ಹಾರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದವು. ಕೊನೆಗೂ ಜು.28ರಂದು ಬೆಳಿಗ್ಗೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅರ್ಧ ಗಂಟೆಯಲ್ಲಿಯೇ ಅವರು ಕೊನೆಯುಸಿರೆಳೆದಿದ್ದರು. ಕುಟುಂಬವು ಕೋವಿಡ್ ನೆಗೆಟಿವ್ ವರದಿಯನ್ನು ತೋರಿಸಿ ಶವವನ್ನು ಪಡೆದುಕೊಳ್ಳಲು ಪ್ರಯತ್ನಿಸಿತ್ತಾದರೂ,ಅದು ನಕಲಿ ವರದಿ ಎಂದು ವೈದ್ಯರು ತಿಳಿಸಿದ್ದರು. ಸಿನ್ಹಾ ಕೊರೋನ ವೈರಸ್‌ನಿಂದ ಮೃತಪಟ್ಟಿದ್ದು ಜು.31ರಂದು ದೃಢಪಟ್ಟ ಬಳಿಕ ಕೋವಿಡ್ ಶಿಷ್ಟಾಚಾರದಂತೆ ಅಂತ್ಯಸಂಸ್ಕಾರವನ್ನು ನಡೆಸಲಾಗಿತ್ತು.

ಸಿನ್ಹಾರ ಕುಟುಂಬವು ಸ್ವೀಕರಿಸಿದ್ದ ನೆಗೆಟಿವ್ ವರದಿ ಲೋಪಗಳಿಂದ ಕೂಡಿದ್ದು,ಅದರಲ್ಲಿ ವೈದ್ಯರ ಹೆಸರೂ ಇರಲಿಲ್ಲ. ಅದು ನಕಲಿ ವರದಿಯಾಗಿತ್ತು ಎನ್ನುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದರು.

ಮೊಬೈಲ್ ನಂಬರ್ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಲ್ಯಾಬ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ಬಿಸ್ವಜಿತ್ ಸಿಕ್ದರ್ ಪ್ರಮುಖ ಆರೋಪಿಯಾಗಿದ್ದು,ಕಳೆದ ನಾಲ್ಕು ತಿಂಗಳುಗಳಿಂದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ಸೋದರ ಇಂದರ್‌ಜಿತ್ ಆತನಿಗೆ ನೆರವಾಗಿದ್ದ. ಮೂರನೇ ಆರೋಪಿ ಅಮಿತ್ ಪೈರಾ ಇವರಿಗೆ ಸಹಕರಿಸಿದ್ದ ಎಂದು ಪೊಲೀಸರು ತಿಳಿಸಿದರು. ಆದರೆ ಸುದ್ದಿಸಂಸ್ಥೆಯ ಪ್ರಾಥಮಿಕ ತನಿಖೆಯಿಂದ ಸಿಕ್ದರ್ ಸೋದರರು ಯಾವುದೇ ಲ್ಯಾಬ್ ಜೊತೆ ಗುರುತಿಸಿಕೊಂಡಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News