ಮುಲ್ಕಿ: ಮಳೆಗಾಳಿಗೆ ಮನೆ ಕುಸಿದು ಮಹಿಳೆಗೆ ಗಾಯ, ಅಪಾರ ಹಾನಿ

Update: 2020-08-02 17:29 GMT

ಮುಲ್ಕಿ: ಇಲ್ಲಿನ ನಗರ ಪಂಚಾಯತ್ ವ್ಯಾಪ್ತಿಯ ಕೆ ಎಸ್ ರಾವ್ ನಗರ ಕೆಇಬಿ ಸರಕಾರಿ ಬಾವಿ ಬಳಿ ರವಿವಾರ ಮಧ್ಯಾಹ್ನ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಮನೆ ಸಂಪೂರ್ಣ ಕುಸಿದಿದ್ದು ಮನೆಯ ಒಳಗಡೆ ಇದ್ದ  ಮಹಿಳೆಯೊಬ್ಬರ ತಲೆಗೆ ಗಂಭೀರ ಗಾಯಗೊಂಡಿದ್ದು ಉಳಿದವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.

ಗಂಭೀರ ಗಾಯಗೊಂಡ  ಮಹಿಳೆಯನ್ನು ಸುಲೋಚನ ನಾಯರ್(59) ಎಂದು ಗುರುತಿಸಲಾಗಿದೆ. ಉಳಿದಂತೆ ಮನೆಯೊಳಗಿದ್ದ ಸೂರಜ, ಜಯಲಕ್ಷ್ಮಿ, ರಕ್ಷಿತ್, ದೇವಿಕಾ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ರವಿವಾರ ಮಧ್ಯಾಹ್ನ  ಮುಲ್ಕಿಯಲ್ಲಿ  ಭಾರಿ ಮಳೆ ಸುರಿದಿದ್ದು ಈ ಸಂದರ್ಭ ಕೆ ಎಸ್ ರಾವ್ ನಗರದ ತಮ್ಮ ಮನೆಯಲ್ಲಿ ಕುಟುಂಬದೊಂದಿಗೆ ಇದ್ದ ಸುಲೋಚನಾ ರವರಿಗೆ ಮನೆಯ ಮೇಲ್ಗಡೆಯಿಂದ ಭಾರಿ ಸದ್ದು ಕೇಳಿಸಿದ್ದು ಗಾಬರಿಯಿಂದ ಮನೆಯವರು ಹೊರಗೆ ಬರುವಷ್ಟರಲ್ಲಿ ಮನೆ ಕುಸಿದಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಸಾಮಾಜಿಕ ಕಾರ್ಯಕರ್ತರಾದ ರಹೀಂ, ಆಸಿಫ್, ತೌಫಿಕ್, ಝಾಹಿದ್, ದೀಕ್ಷಿತ್, ಮುಲ್ಕಿ ನ. ಪಂ. ಸದಸ್ಯರಾದ ಸಂದೀಪ್, ಮುನ್ನಾ ಯಾನೆ ಮಹೇಶ, ಮಾಜಿ ನಪಂ ಸದಸ್ಯ ಕುಳಾಯಿ ಬಶೀರ್ ಮತ್ತಿತರರು ಸೇರಿಕೊಂಡು ಗಾಯಾಳುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆ ಕುಸಿತದಿಂದ ಸುಮಾರು 10 ಲಕ್ಷದವರೆಗೆ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಮುಲ್ಕಿ ವಿಶೇಷ ತಹಶಿಲ್ದಾರ್ ಮಾಣಿಕ್ಯ ಎನ್. ಆರ್ .ಐ. ದಿಲೀಪ್ ರೋಡ್ಕರ್. ಗ್ರಾಮಕರಣಿಕ ಪ್ರದೀಪ ಶೆಣೈ ಬೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News