ಮರ ಗಿಡಗಳಿಗೆ ರಕ್ಷೆ ಕಟ್ಟಿ ‘ವೃಕ್ಷಾ ಬಂಧನ’ ಆಚರಣೆ

Update: 2020-08-03 10:03 GMT

ಮಂಗಳೂರು, ಆ.3: ಪ್ರಕೃತಿಯ ಜತೆಗೆ ಮತ್ತಷ್ಟು ಹತ್ತಿರವಾಗುವ, ಸ್ನೇಹ ಸಂಪರ್ಕ ಬೆಳೆಸುವ ಉದ್ದೇಶದಿಂದ ಬೆಳ್ತಂಗಡಿಯ ಮುಂಡಾಜೆಯ ಕೃಷಿಕರಾದ ಸಚಿನ್ ಭಿಡೆಯವರು ರಕ್ಷಾ ಬಂಧನವನ್ನು ಮರಗಳಿಗೆ ರಕ್ಷೆ ಕಟ್ಟುವ ಮೂಲ ವೃಕ್ಷಾ ಬಂಧನವಾಗಿ ಆಚರಿಸಿದರು.

ಪರಿಸರ ಪ್ರೇಮಿಯಾಗಿರುವ ಸಚಿನ್ ಭಿಡೆಯವರು ಈ ರಕ್ಷಾ ಬಂಧನದ ಸಂದರ್ಭದಲ್ಲಿ ಮರ, ಗಿಡಗಳಿಗೆ ರಕ್ಷೆಯನ್ನು ಕಟ್ಟಿ ಹೊಸ ಸಂದೇಶವನ್ನು ಸಾರಿದ್ದಾರೆ. ಸಚಿನ್‌ರವರು ಇತ್ತೀಚೆಗೆ ತನ್ನ ನಾಲ್ಕೂವರೆ ಎಕರೆ ಕೃಷಿ ಜಾಗವನ್ನು ‘ಕಾರ್ಗಿಲ್ ವನ’ಎಂಬ ಅಡವಿ ನಿರ್ಮಾಣ ಮಾಡಿದ್ದಾರೆ.
ಇಂದು ಅದೇ ಕಾರ್ಗಿಲ್ ವನದಲ್ಲಿ ಕಾರ್ಗಿಲ್ ಹುತಾತ್ಮರ ನೆನಪಿನ ಸ್ಮರಣಾರ್ಥವಾಗಿ ಅಲ್ಲಿನ ಗಿಡಗಳಿಗೆ ರಕ್ಷೆ ಕಟ್ಟುವ ಮೂಲಕ ವೃಕ್ಷಾ ಬಂಧನ ಆಚರಿಸಿದರು.

ಕಾರ್ಯಕ್ರಮದಲ್ಲಿ ಮುಂಡಾಜೆ ಗ್ರಾಮ ಕೊರೋನ ವಾರಿಯರ್ಸ್ ಆಶಾ ಕಾರ್ಯಕರ್ತೆಯರಾದ ಗಾಯತ್ರಿ, ಶಶಿ, ಚಂದ್ರಾವತಿ, ಜಯಂತಿ ಯವರು ತೆಂಗಿನ ಮರದ ಗರಿಯನ್ನು ವಿನ್ಯಾಸ ಗೊಳಿಸಿ ಅದನ್ನೇ ರಕ್ಷಾ ಬಂಧನವನ್ನಾಗಿ ಗಿಡಗಳಿಗೆ ಕಟ್ಟಿದರು.

‘‘ನಮ್ಮ ಯೋಧರು ನಮ್ಮ ಹೆಮ್ಮೆ. ಹುತಾತ್ಮರಾದ ಯೋಧರು ಗಿಡದ ರೂಪದಲ್ಲಿ ನಮ್ಮ ಜತೆ ಅಮರರಾಗಿದ್ದಾರೆ. ಯೋಧರಿಗೆ ಎಂದೂ ಸಾವಿಲ್ಲ. ಪ್ರಸ್ತುತ ಈ ಕೊರೋನ ಸಂದರ್ಭದಲ್ಲಿ ಸ್ಥಳೀಯ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಈ ಕೊರೋನ ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ನಮ್ಮ ದೇಶದ ಯೋಧರಿಗೆ ಗೌರವದ ಜತೆಗೆ ನಮ್ಮ ಕೊರೋನ ವಾರಿಯರ್ಸ್‌ಗಳನ್ನೂ ಗೌರವಿಸುತ್ತಾ ಅವರಿಂದ ನಮ್ಮ ಕಾರ್ಗಿಲ್ ವನದ ಮರಗಳಿಗೆ ರಕ್ಷೆ ಕಟ್ಟುವ ಮೂಲಕ ಪ್ರಕೃತಿಯ ರಕ್ಷಣೆಯ ಜವಾಬ್ಧಾರಿಯ ಸಂದೇಶ ಸಾರುವ ಸಲುವಾಗಿ ಈ ಕಾರ್ಯಕ್ರಮ ಮಾಡಲಾಗಿದೆ’’.

- ಸಚಿನ್ ಬಿಢೆ, ಕೃಷಿಕರು, ಮುಂಡಾಜೆ, ಬೆಳ್ತಂಗಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News