ಉಡುಪಿ: ಜಿಲ್ಲೆಯಾದ್ಯಂತ ಮೀನುಗಾರರಿಂದ ಸಮುದ್ರ ಪೂಜೆ

Update: 2020-08-03 12:52 GMT

ಮಲ್ಪೆ, ಆ. 3: ಮಲ್ಪೆ ಮೀನುಗಾರ ಸಂಘಹಾಗೂ ನಾಡದೋಣಿ ಮೀನುಗಾರ ಸಂಘಗಳ ನೇತೃತ್ವದಲ್ಲಿ ಸಮಸ್ತ ಮೀನುಗಾರರ ಶ್ರೇಯೋಭಿವೃದ್ದಿಗಾಗಿ ಮಲ್ಪೆ ವಡಭಾಂಡೇಶ್ವರದ ಸಮುದ್ರತೀರದಲ್ಲಿ ಸೋಮವಾರ ಸಾಮೂಹಿಕ ಸಮುದ್ರ ಪೂಜೆ ನಡೆಸಲಾಯಿತು.

ಮುಂಜಾನೆ ಮಲ್ಪೆ ಹಾಗೂ ಆಸುಪಾಸಿನ ಮೀನುಗಾರರು ವಡಭಾಂಡೇಶ್ವರದ ಬಲರಾಮ ಹಾಗೂ ಬೊಬ್ಬರ್ಯ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆಯಲ್ಲಿ ಸಮುದ್ರ ಕಿನಾರೆಗೆ ಬಂದು ಪೂಜಾ ವಿಧಿಗಳನ್ನು ನಡೆಸಿ ಮುಂದಿನ ಮೀನುಗಾರಿಕಾ ಋತುವಿನಲ್ಲಿ ಹೇರಳ ಮತ್ಸ ಸಂಪತ್ತು ವೃದ್ಧಿಯಾಗುವಂತೆ ತಾವು ನಂಬಿರುವ ಸಮುದ್ರ ದೇವತೆಯನ್ನು ಪ್ರಾರ್ಥಿಸಿದರು.

ಅಲ್ಲದೇ ಮುಂಬರುವ ದಿನಗಳಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ವೇಳೆ ಯಾವುದೇ ಅವಘಡಗಳು, ಪ್ರಾಕೃತಿಕ ವಿಕೋಪಗಳು ಉಂಟಾಗದಂತೆ ಗಂಗಾಮಾತೆ ಅನುಗ್ರಹಿಸುವಂತೆ ಪ್ರಾರ್ಥಿಸಿಕೊಂಡು ತಾವು ತಂದಿದ್ದ ಹಾಲು, ಸೀಯಾಳ, ಲಪುಷ್ಪಗಳನ್ನು ಸಮುದ್ರರಾಜನಿಗೆ ಅರ್ಪಿಸಿದರು.

ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ, ನಾಡದೋಣಿ ಸಂಘದ ಅಧ್ಯಕ್ಷ ಜನಾರ್ದನ ತಿಂಗಳಾಯ, ಮೀನುಗಾರಿಕಾ ಉಪನಿರ್ದೇಶಕ ಗಣೇಶ್ ಕೆ., ಸಹಾಯಕ ನಿರ್ದೇಶಕ ಶಿವಕುಮಾರ್, ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ಮೀನುಗಾರ ಸಂಘದ ಮಾಜಿ ಅಧ್ಯಕ್ಷರಾದ ಹಿರಿಯಣ್ಣ ಟಿ. ಕಿದಿಯೂರು, ಕೇಶವ ಎಂ. ಕೋಟ್ಯಾನ್, ಮೀನುಗಾರರ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ರಮೇಶ್ ಕೋಟ್ಯಾನ್, ಶಿವಾನಂದ, ನವೀನ್ ಕೋಟ್ಯಾನ್, ಮಧುಕರ ಸುವರ್ಣ, ಕಿಶೋರ್ ಡಿ. ಸುವರ್ಣ, ಮೋಹನ್ ಕುಂದರ್, ಹರಿಶ್ಚಂದ್ರ ಕಾಂಚನ್, ರವಿ ಸುವರ್ಣ, ಗೋಪಾಲ್ ಆರ್.ಕೆ., ದಯಾನಂದ ಕುಂದರ್, ರತ್ನಾಕರ ಸಾಲ್ಯಾನ್, ರಾಮಚಂದ್ರ ಕುಂದರ್, ಕಿಶೋರ್ ಪಡುಕರೆ, ನಾರಾಯಣ ಕರ್ಕೇರ, ತಿಮ್ಮ ಮರಕಾಲ, ಜಲಜ ಕೋಟ್ಯಾನ್, ಬೇಬಿ ಹೆಚ್. ಸಾಲ್ಯಾನ್, ಮತಿತಿರ ಪ್ರಮುಖರು ಪಾಲ್ಗೊಂಡಿದ್ದರು.

ಕಾಪು: ಕಾಪು ತಾಲೂಕಿನ ವಿವಿಧೆಡೆಗಳಲ್ಲಿ ಮೀನುಗಾರರು ಸೋಮವಾರ ಸಮುದ್ರಪೂಜೆಯೊಂದಿಗೆ ಕ್ಷೀರಾಭಿಷೇಕ ನಡೆಸಿದರು. ಕಾಪು, ಪೊಲಿಪು, ಕೈಪುಂಜಾಲು, ಮೂಳೂರು ಮೊಗವೀರ ಮಹಾಸಭಾಗಳ ನೇತೃತ್ವದಲ್ಲಿ ವಿವಿಧ ಭಜನಾ ಮಂದಿರಗಳು ಮತ್ತು ಪ್ರಾರ್ಥನಾ ಮಂದಿರಗಳ ಸಹಕಾರದೊಂದಿಗೆ ಸಮುದ್ರ ಪೂಜೆ ನೆರವೇರಿಸಲಾಯಿತು.

ಪ್ರತೀ ವರ್ಷ ನೂಲ ಹುಣ್ಣಿಮೆಯಂದು ಕರಾವಳಿಯಲ್ಲಿ ಸಮುದ್ರ ಪೂಜೆ ನಡೆಯುತ್ತಿದೆ. ಆ ಮೂಲಕ ಮೀನುಗಾರರು ಹೇರಳ ಮತ್ಸ್ಯ ಸಂಪತ್ತು ದೊರೆಯುವಂತೆ ಮತ್ತು ಮೀನುಗಾರಿಕೆಯ ವೇಳೆ ಯಾವುದೇ ರೀತಿಯ ತೊಂದರೆಗಳು ಆಗದಿರಲೆಂಬ ಪ್ರಾರ್ಥನೆಯೊಂದಿಗೆ ಕ್ಷೀರಾಭಿಷೇಕ ಹಾಗೂ ಸೀಯಾಳಾಭಿಷೇಕ ಸಹಿತ ಪೂಜೆ ನೆರವೇರಿಸುತ್ತಾರೆ.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಮೊಗವೀರ ಮಹಾಸಭೆ, ಪೊಲಿಪು ಮೊಗವೀರ ಮಹಾಸಭೆ, ಕೈಪುಂಜಾಲು ಮೊಗವೀರ ಮಹಾಸಭೆ, ಮೂಳೂರು ಮೊಗವೀರ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು, ಮೊಗವೀರ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News