ಕೊರೋನಾ ನಿಯಂತ್ರಣಕ್ಕೆ ರಾಜ್ಯ, ಕೇಂದ್ರ ಸರಕಾರಗಳು ವಿಫಲ : ದಿನೇಶ್ ಗುಂಡೂರಾವ್ ಆರೋಪ

Update: 2020-08-03 12:52 GMT

ಉಡುಪಿ, ಆ.3: ದೇಶಾದ್ಯಂತ ವ್ಯಾಪಕವಾಗಿ ಹಬ್ಬಿರುವ ಕೊರೋನಾ ರೋಗ ನಿಯಂತ್ರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ವಿಫಲವಾಗಿವೆ. ದೇಶ ಎದುರಿಸುತ್ತಿರುವ ಸಂಕಷ್ಟ ಸಮಯದಲ್ಲೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರಕಾರ ಕೋಟ್ಯಾಂತರ ರೂ.ಗಳ ಹಗರಣ ನಡೆಸಿದೆ. ಇವೆಲ್ಲವುಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ರಾಜ್ಯ ಸರಕಾರದ ವೈಫಲ್ಯಗಳು ಹಾಗೂ ಭ್ರಷ್ಟಾಚಾರ ಪ್ರಕರಣಗಳ ಕುರಿತು ಜನರ ಗಮನ ಸೆಳೆಯಲು ಕೆಪಿಸಿಸಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಂಗವಾಗಿ ಸೋಮವಾರ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾಜಿ ಸಚಿವೆ ಜಯಮಾಲಾ ಅವರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತಿದ್ದರು.

ರಾಜ್ಯದಲ್ಲಿ ಸಲಕರಣೆಗಳ ಖರೀದಿ ವಿಚಾರದಲ್ಲಿ ವ್ಯಾಪಕ ಲೂಟಿ ನಡೆದಿದೆ. ಈ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿ 25 ದಿನ ಕಳೆದರೂ ಇನ್ನೂ ಸರಕಾರ ಉತ್ತರ ನೀಡಿಲ್ಲ. ಯಾವುದೇ ಮಾಹಿತಿಯೂ ವಿಪಕ್ಷ ನಾಯಕರಿಗೆ ಬಂದಿಲ್ಲ. ವೆಂಟಿಲೇಟರ್, ಪಿಪಿಇ, ಸ್ಯಾನಿಟೈಸರ್ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಮೂರರಿಂದ ನಾಲ್ಕು ಪಟ್ಟು ಹೆಚ್ಚು ಹಣ ಕೊಟ್ಟು ಇವುಗಳನ್ನು ಖರೀದಿಸಲಾಗಿದೆ. ಈ ಮೂಲಕ ಬಿಜೆಪಿ ಎರಡು ಸಾವಿರ ಕೋಟಿ ರೂ. ಲೂಟಿ ಮಾಡಿದೆ ಎಂದವರು ಆರೋಪಿಸಿದರು.

ಇದನ್ನು ಪ್ರಶಿಸಿದರೆ ಲೀಗಲ್ ನೋಟೀಸುಊ ನೀಡುತ್ತಾರೆ. ಧೈರ್ಯವಿದ್ದರೆ ಮಾನನಷ್ಟ ಮೊಕದ್ದಮೆ ಹಾಕಿ. ಕಾಂಗ್ರೆಸ್ ಕೋರ್ಟ್ ಮೂಲಕ ಹೋರಾಟ ನಡೆಸುತ್ತದೆ. ಕೊರೋನಾ ಸಲಕರಣೆಗಳ ಖರೀದಿ ಬಗ್ಗೆ ಸಮಗ್ರ ತನಿಖೆಯಾಗಲಿ. ಈ ಬಗ್ಗೆ ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ದಿನೇಶ್ ಗುಂಡೂರಾವ್ ನುಡಿದರು.

ಕೊರೋನಾ ಆರಂಭ ಕಾಲದಲ್ಲಿ ಇದನ್ನು ಎದುರಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಪಕ್ಷಾತೀತ ಬೆಂಬಲ ನೀಡಲಾಯಿತು. ಮಾ.24ರಂದು ಪ್ರಧಾನ ಮಂತ್ರಿಗಳು ಲಾಕ್‌ಡೌನ್ ಘೋಷಣೆ ಮಾಡಿದಾಗ ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕೇವಲ 564 ಆಗಿತ್ತು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಗಳು 21 ದಿನಗಳಲ್ಲಿ ನಾವು ಕೊರೊನಾ ವಿರುದ್ದ ಜಯಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಪ್ರಧಾನಿಯವರ ಮಾತಿನಂತೆ ಜನರು ಚಪ್ಪಾಳೆ ತಟ್ಟಿದರು. ಜಾಗಟೆ ಬಾರಿಸಿದರು. ಆದರೂ ಸೋಂಕು ನಿಯಂತ್ರಣಕ್ಕೆ ಬಾರದೆ ಈಗ ಅದು 17 ಲಕ್ಷವನ್ನು ಮೀರಿದೆ ಎಂದರು.

ಕೊರೋನ ನಿಯಂತ್ರಣದ ಕೆಲಸ ಆಗಿಲ್ಲ:  ದೇಶ ಹಾಗೂ ರಾಜ್ಯದೆಲ್ಲೆಡೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ಪ್ರಧಾನಿಯಾಗಲಿ, ಕೇಂದ್ರದ ಸಚಿವ ರಾಗಲಿ ಅಥವಾ ರಾಜ್ಯದ ಸಿಎಂ ಮತ್ತವರ ಸಂಪುಟ ಸಹೋದ್ಯೋಗಿಗಳು ಹೊಸದಿಲ್ಲಿ ಮತ್ತು ಬೆಂಗಳೂರು ಬಿಟ್ಟು ಹೊರಗೆ ಹೋಗಿಲ್ಲ. ಜನರ ಸಮಸ್ಯೆ ಗಳನ್ನು ಪರಿಹರಿಸಲು ಪರಿಣಾಮಕಾರಿ ಕೆಲಸ ಮಾಡಿಲ್ಲ. ಆಯಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರಿಂದ ಯಾವುದೇ ಕೆಲಸ ನಡೆಯುತ್ತಿಲ್ಲ. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಇತ್ತ ಬಂದಿಲ್ಲ, ಯಾವುದೇ ಕ್ರಮತೆಗೆದುಕೊಂಡಿಲ್ಲ ಎಂದು ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ಸ್ವಾಗತ: ಕಾಂಗ್ರೆಸ್ ರಾಮಮಂದಿರ ನಿರ್ಮಾಣವನ್ನು ಸ್ವಾಗತಿಸುತ್ತದೆ. ಭವ್ಯವಾದ ರಾಮಮಂದಿರ ನಿರ್ಮಾಣ ಆಗಲಿ. ಮಂದಿರಕ್ಕೆ ಯಾರ ವಿರೋಧವೂ ಇಲ್ಲ. ಆದರೆ ರಾಮಮಂದಿರದ ಉದ್ದೇಶ ದುರುಪಯೋಗ ಬೇಡ. ಮಂದಿರ ನಿರ್ಮಾಣ ಆದರೆ ಕೊರೋನ ದೂರವಾಗಲ್ಲ. ಬಿಜೆಪಿ ಅವೈಜ್ಞಾನಿಕವಾಗಿ ಮಾತನಾಡುವುದನ್ನು ಬಿಡಬೇಕು ಎಂದು ದಿನೇಶ್ ಗುಂಡೂರಾವ್ ನುಡಿದರು.

ಯಡಿಯೂರಪ್ಪ ಶೀಘ್ರ ಗುಣಮುಖರಾಗಲಿ: ಕೊರೋನಕ್ಕೆ ಪಾಸಿಟಿವ್ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರ ಗುಣಮುಖ ರಾಗಲಿ ಎಂದು ಗುಂಡೂರಾವ್ ಹಾರೈಸಿದರು. ಯಡಿಯೂರಪ್ಪ ರಾಜ್ಯದ ಹಿರಿಯ ನಾಯಕರು. ಅಮಿತ್ ಶಾ, ಐವನ್ ಡಿಸೋಜ ಎಲ್ಲರೂ ಗುಣಮುಖ ರಾಗಲಿ ಎಂದರು.

ಯಡಿಯೂರಪ್ಪರಿಗೆ ವಯಸ್ಸಾಗಿರುವುದರಿಂದ ಎಲ್ಲರಿಗೂ ಆತಂಕ ಇರುತ್ತದೆ. ಸಿಎಂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ವೈದ್ಯರು ಹೆಚ್ಚು ಮುತುವರ್ಜಿಯಿಂದ ಚಿಕಿತ್ಸೆ ನೀಡಬೇಕು ಎಂದು ಅವರು ಹಾರೈಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಯು.ಆರ್.ಸಭಾಪತಿ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಂಗಳೂರು ಕಾರ್ಪೊರೇಟರ್ ವಿನಯರಾಜ್, ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಪ್ರಮುಖರಾದ ದಿನೇಶ್ ಪುತ್ರನ್, ಹರೀಶ್ ಕಿಣಿ, ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಲೆ, ಮುರಳೀ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ಎಂ.ಎ.ಗಫೂರ್, ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.

ಅಕ್ರಮ ಮರಳು ಸಾಗಾಟ: ಅಧಿವೇಶನದಲ್ಲಿ ಚರ್ಚೆ

ಕೊರೊನಾ ರೋಗವನ್ನು ನೆಪವಾಗಿಟ್ಟುಕೊಂಡು ಬಿಜೆಪಿ ಸರಕಾರ ಪ್ರತಿಯೊಂದನ್ನೂ ಹರಾಜಿಗಿಟ್ಟಿದೆ. ಭೂಸುಧಾರಣೆ ಕಾನೂನು ನಿಷ್ಕ್ರೀಯ ಗೊಳಿಸಿದೆ. ಎಪಿಎಂಸಿ ಆ್ಯಕ್ಟ್ ಬದಲಾಗಿದೆ. ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ಇದಕ್ಕೂ ಕೊರೊನಾಕ್ಕೂ ಏನು ಸಂಬಂಧ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಕೊರೊನಾ ಲಾಕ್‌ಡೌನ್ ನಡುವೆ ಉಡುಪಿ ಜಿಲ್ಲೆಯಲ್ಲಿ ಸಿಮೆಂಟ್, ಮರಳು ದಂಧೆ ನಡೆದಿದೆ. ಇದರಲ್ಲಿ ಅಧಿಕಾರಿಗಳು ಹಾಗೂ ಶಾಸಕರು ನೇರವಾಗಿ ಶಾಮೀಲಾಗಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿಯೂ ಚರ್ಚೆ ಮಾಡಲಾ ಗುವುದು. ಜೈಶ್ರೀರಾಮ್ ಹೆಸರು ಹೇಳಿಕೊಂಡು ಬಿಜೆಪಿ ಯವರು ದೇವರಿಗೆ ಮೋಸ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಯಿಂದ ಹಿಡಿದು ಆಡಳಿತ ಪಕ್ಷದ ಎಲ್ಲ ಜನಪ್ರತಿನಿಧಿಗಳು ಸುಳ್ಳು ಹೇಳುತ್ತಿದ್ದಾರೆ. ಜನರಿಗೆ ಇದು ಅರ್ಥವಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News