ಉಡುಪಿ : 126 ಮಂದಿಗೆ ಕೊರೋನ ಸೋಂಕು ದೃಢ, ಜಿಲ್ಲೆಯಲ್ಲಿ ನಾಲ್ವರು ಬಲಿ

Update: 2020-08-03 14:11 GMT

ಉಡುಪಿ, ಆ.3: ಉಡುಪಿ ಜಿಲ್ಲೆಯಲ್ಲಿ ಸೋಮವಾರ 126 ಮಂದಿಯಲ್ಲಿ ಕೋವಿಡ್ -19 ಸೋಂಕಿನ ಪಾಸಿಟಿವ್ ದೃಢಪಟ್ಟಿದೆ. ಆದರೆ ದಿನದಲ್ಲಿ 1086 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ನೆಗೆಟಿವ್ ಫಲಿತಾಂಶ ನೀಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಇದರೊಂದಿಗೆ ಜಿಲ್ಲೆಯ ಉದ್ಯಾವರ, ಮಂದಾರ್ತಿ, ಕುಂದಾಪುರ ಹಾಗೂ ಉಡುಪಿಯ ನಾಲ್ವರು ಇಂದು ಕೊರೋನ ಸೋಂಕಿನೊಂದಿಗೆ ಮೃತಪಟ್ಟಿದ್ದು, ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೋನಕ್ಕೆ ಬಲಿಯಾದವರ ಸಂಖ್ಯೆ 44ಕ್ಕೇರಿದೆ.

ಇಂದು ಕೊರೋನ ಸೋಂಕು ಪತ್ತೆಯಾದ 126 ಮಂದಿಯಲ್ಲಿ ಉಡುಪಿ ತಾಲೂಕಿನ 58 ಮಂದಿ, ಕುಂದಾಪುರ ತಾಲೂಕಿನ 34 ಹಾಗೂ ಕಾರ್ಕಳ ತಾಲೂಕಿನ 28 ಮಂದಿ ಸೇರಿದ್ದಾರೆ. ಉಳಿದ ಆರು ಮಂದಿ ಹೊರಜಿಲ್ಲೆಯವರಾಗಿದ್ದಾರೆ. 70 ಮಂದಿ ಪುರುಷರು, 52 ಮಂದಿ ಮಹಿಳೆಯರು ಹಾಗೂ 10 ವರ್ಷದೊಳಗಿನ ಪ್ರಾಯದ ಒಂದು ಗಂಡು ಹಾಗೂ ಮೂರು ಹೆಣ್ಣು ಮಕ್ಕಳು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಇಂದಿನ 126 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 4800ಕ್ಕೇರಿದೆ ಎಂದರು.

116 ಮಂದಿ ಗುಣಮುಖ: ಜಿಲ್ಲೆಯಲ್ಲಿ ಸೋಮವಾರ ಒಟ್ಟು 116 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದಾರೆ. ಕುಂದಾಪುರ ಆಸ್ಪತ್ರೆಯಿಂದ 56 ಮಂದಿ, ಕಾರ್ಕಳದಿಂದ 10, ಉಡುಪಿಯಿಂದ 13 ಮಂದಿಯೊಂದಿಗೆ ಹೋಮ್ ಐಸೋಲೇಷನ್‌ನಲ್ಲಿದ್ದ 37 ಮಂದಿಯೂ ಬಿಡುಗಡೆಗೊಂಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಯಾದವರ ಸಂಖ್ಯೆ 2812ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 1952 ಮಂದಿ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಬಂದರೂ, ರೋಗದ ಗುಣಲಕ್ಷಣಗಳಿಲ್ಲದ 1116 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಪಾಸಿಟಿವ್ ಬಂದವರಲ್ಲಿ 27 ಮಂದಿ ಶೀತಜ್ವರ, ನಾಲ್ವರು ಉಸಿರಾಟ ಸಮಸ್ಯೆಯಿಂದ ಬಳಲಿದ್ದರೆ ಉಳಿದವರು ಈಗಾಗಲೇ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಎಂದೂ ಡಾ.ಸೂಡ ತಿಳಿಸಿದರು.

1122 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಇಂದು 1122 ಮಂದಿಯ ಗಂಟಲು ದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 966 ಮಂದಿ, ಕೋವಿಡ್ ಸಂಪರ್ಕಿತರು 17 ಮಂದಿ ಇದ್ದರೆ, ಉಸಿರಾಟ ತೊಂದರೆಯ ಒಬ್ಬರು, ಶೀತಜ್ವರದಿಂದ ಬಳಲುವ 30 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 108 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ. ಸೂಡ ತಿಳಿಸಿದರು.

ಇಂದು ಪಡೆದ 1122 ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 34,500ಕ್ಕೇರಿದೆ. ಇವುಗಳಲ್ಲಿ ಈವರೆಗೆ 29,174 ನೆಗೆಟಿವ್, 4800 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 44 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 526 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ. ಸೂಡ ವಿವರಿಸಿದರು.

ಜಿಲ್ಲೆಯಲ್ಲಿ ಸೋಮವಾರ 39 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ 8 ಮಂದಿ ಕೋವಿಡ್ ಶಂಕಿತರು, 14 ಮಂದಿ ಉಸಿರಾಟ ತೊಂದರೆಯವರು ಹಾಗೂ 17 ಮಂದಿ ಶೀತಜ್ವರದಿಂದ ಬಳಲುವವರು ಸೇರಿದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 54 ಮಂದಿ ಬಿಡುಗಡೆಗೊಂಡಿದ್ದು, 310 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 68 ಮಂದಿ ಸೇರಿದಂತೆ ಒಟ್ಟು 8,207 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1301 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಸೋಮವಾರ ನಾಲ್ವರು ಬಲಿ : ಬೇರೆ ಬೇರೆ ಕಾಯಿಲೆಗಳಿಂದ ನರಳುತಿದ್ದ ಉಡುಪಿ ಜಿಲ್ಲೆಯ ಉದ್ಯಾವರ, ಮಂದಾರ್ತಿ, ಕುಂದಾಪುರ ಹಾಗೂ ಉಡುಪಿಯ ನಾಲ್ವರು ಸೋಮವಾರ ಕೋವಿಡ್ ಸೊಂಕಿನೊಂದಿಗೆ ಮೃತಪಟ್ಟಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕ್ಯಾನ್ಸರ್‌ಗಾಗಿ ಮಣಿಪಾಲ ಕೆಎಂಸಿಗೆ ಚಿಕಿತ್ಸೆಗೆ ದಾಖಲಾಗಿದ್ದ ಮಂದಾರ್ತಿಯ 49ರ ಹರೆಯ ಮಹಿಳೆ ಕೊರೋನಕ್ಕೆ ಪಾಸಿಟಿವ್ ಬಂದ ಬಳಿಕ ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತ ಪಟ್ಟಿದ್ದಾರೆ. ಡಯಾಬಿಟಿಸ್ ಹಾಗೂ ಇತರ ಕಾಯಿಲೆಯ ಸುಮಾರು 60 ಪ್ರಾಯದ ಉದ್ಯಾವರದ ವ್ಯಕ್ತಿಯೊಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅದೇ ರೀತಿ ಕುಂದಾಪುರ ಕಿರಿಮಂಜೇಶ್ವರದ 80ರ ಹರೆಯದ ವೃದ್ಧೆಯೊಬ್ಬರು ಕುಂದಾಪುರ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಉಡುಪಿ ಇಂದಿರಾ ನಗರದ 44 ಹರೆಯ ವ್ಯಕ್ತಿಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News