ಕಾಸರಗೋಡು : ಮಂಗಳೂರಿಗೆ ಡೈಲಿ ಪಾಸ್ ಪುನಾರಂಭಕ್ಕೆ ತೀರ್ಮಾನ

Update: 2020-08-03 14:45 GMT

ಕಾಸರಗೋಡು, ಆ.3 : ಕೋವಿಡ್ 19 ಸೋಂಕು ಭೀತಿ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದ ನಿಯಂತ್ರಣಗಳನ್ನು ಸಡಿಲಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ಸೋಮವಾರ ಈ ಕುರಿತು ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ವರ್ತಕರ  ಸಂಘದ ಪ್ರತಿನಿಧಿಗಳ ಜತೆಗೆ ನಡೆಸಿದ ಆನ್ ಲೈನ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇತರ ಪ್ರದೇಶಗಳ ಎಲ್ಲ ಅಂಗಡಿಗಳು ಬೆಳಗ್ಗೆ 8 ರಿಂದ ರಾತ್ರಿ 9 ಗಂಟೆ ವರೆಗೆ ಪ್ರತಿದಿನ ತೆರೆದು ಕಾರ್ಯಾಚರಿಸಬಹುದಾಗಿದೆ.

ಮಂಗಳೂರಿಗೆ ತೆರಳಿ ಮರಳುವವರಿಗಾಗಿ ರೆಗ್ಯುಲರ್ ಪಾಸ್ ಪುನರರಂಭ

ಮಂಗಳೂರಿಗೆ ಪ್ರತಿದಿನ ತೆರಳಿ, ಮರಳುವವರಿಗಾಗಿ ರೆಗ್ಯುಲರ್ ಪಾಸ್ ಸೌಲಭ್ಯ ಪುನರಾರಂಭಿಸಲಾಗುವುದು. ಆದರೆ 7 ದಿನಗಳ ನಂತರ ಹೀಗೆ ಪ್ರಯಾಣ ನಡೆಸುವವರು ಕೋವಿಡ್ ಆಂಟಿಜೆನ್ ಟೆಸ್ಟ್ ಗೆ ಒಳಗಾಗಬೇಕು. ವಿವಾಹ, ಮರಣ ಇತ್ಯಾದಿ ಸಂಬಂಧಿ ಸಮಾರಂಭಗಳಿಗೆ ಅಂತರ್ ರಾಜ್ಯ ಪ್ರಯಾಣ ನಡೆಸುವವರಿಗೂ ಮಂಜೂರಾತಿಯಿದೆ. ಇವರೂ ಆಂಟಿಜೆನ್ ಟೆಸ್ಟ್ ಗೆ ಒಳಗಾಗಬೇಕು.

ಆಹಾರ ಸಾಮಗ್ರಿಗಳೊಂದಿಗೆ ವಾಹನಗಳಲ್ಲಿ ಜಿಲ್ಲೆಯಿಂದ ಕರ್ನಾಟಕಕ್ಕೆ ತೆರಳಲು ಅಭ್ಯಂತರವಿಲ್ಲ

ಆಹಾರ ಸಾಮಗ್ರಿಗಳೊಂದಿಗೆ ವಾಹನಗಳಲ್ಲಿ ಜಿಲ್ಲೆಯಿಂದ ಕರ್ನಾಟಕಕ್ಕೆ ತೆರಳಲು ಅಭ್ಯಂತರವಿಲ್ಲ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಸಭೆಯಲ್ಲಿ ತಿಳಿಸಿದರು. ವಾಹನಗಳನ್ನು ಸೂಕ್ತ ಕ್ರಮದಲ್ಲಿ ರೋಗಾಣು ನಾಶ ನಡೆಸಬೇಕು. ಯಾವೆಲ್ಲ ಅಂಗಡಿಗಳಿಗೆ ಈ ವಾಹನಗಳ ಮೂಲಕ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂಬ ಬಗ್ಗೆ ವಾಹನದಲ್ಲಿರುವ ಸಿಬ್ಬದಿ ದಾಖಲೆ ಇರಿಸಿಕೊಳ್ಳಬೇಕು. ವಾಹನದ ಚಾಲಕ, ಇತರ ಸಿಬ್ಬಂದಿ ಮಾಸ್ಕ್, ಸಾನಿಟೈಸರ್ ಬಳಸಬೇಕು. ಕರ್ನಾಟಕಕ್ಕೆ ತೆರಳಿ ಮರಳಿದ ವೇಳೆ ಚಾಲಕ ಮತ್ತು ಇತರ ಸಿಬ್ಬಂದಿ 7 ದಿನ ನಂತರ ಆಂಟಿಜೆನ್ ಟೆಸ್ಟ್ ಗೆ ಒಳಪಡಬೇಕು ಎಂದು ಸಭೆ ತಿಳಿಸಿದೆ.

ರಾಷ್ಟ್ರೀಯ ಹೆದ್ದಾರಿ ಬದಿ, ಕೆ.ಎಸ್.ಟಿ.ಪಿ. ರಸ್ತೆ ಬದಿಯ ಹೋಟೆಲ್ ಗಳು ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ಬೆಳಗ್ಗೆ 8 ರಿಂದ ರಾತ್ರಿ 9 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು. ಆಹಾರ ಪೊಟ್ಟಣಗಳನ್ನು (ಪಾರ್ಸೆಲ್)ವಿತರಿಸಬಹುದು. ಆದರೆ ಹೋಟೆಲ್ ಗಳಲ್ಲಿ ಕುಳಿತು ಆಹಾರ ಸೇವನೆಗೆ ಅನುಮತಿಯಿಲ್ಲ ಎಂದು ತಿಳಿಸಲಾಗಿದೆ.

ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಜಿಲ್ಲೆಯ ಸ್ಥಿತಿ-ಗತಿಗಳನ್ನು ವಿವರಿಸಿದರು.

ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವ್ಯಾಪಾರಿ-ವ್ಯವಸಾಯಿ ಪ್ರತಿನಿಧಿಗಳಾದ ಕೆ.ಅಹಮ್ಮದ್ ಶರೀಫ್, ರಾಘವನ್ ವೆಳುತ್ತೋಳಿ, ಹೋಟೆಲ್ ಆ್ಯಂಡ್ ರೆಸ್ಟಾರೆಂಟ್ ಅಸೋಸಿಯೇಶನ್ ಪ್ರತಿನಿಧಿಗಳಾದ ನಾರಾಯಣ ಪೂಜಾರಿ, ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಶನ್ ಪ್ರತಿನಿಧಿ ಟಿ.ಪಿ. ಬಾಲನ್, ಕಿರು ಉದ್ದಿಮೆ ಅಸೋಸಿಯೇಶನ್ ಪ್ರತಿನಿಧಿ ಇಮ್ಯಾನುವೆಲ್ , ಉದ್ಯಮಿ ಎಚ್.ಗೋಕುಲ್ ದಾಸ್ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News