ದ.ಕ. ಜಿಲ್ಲೆ : ಕೋವಿಡ್‌ಗೆ ಏಳು ಬಲಿ, ಹೊಸದಾಗಿ 153 ಮಂದಿಗೆ ಸೋಂಕು ದೃಢ

Update: 2020-08-03 15:03 GMT

ಮಂಗಳೂರು, ಆ.3: ಕೊರೋನ ಸೋಂಕಿನಿಂದಾಗಿ ದ.ಕ. ಜಿಲ್ಲೆಯಲ್ಲಿ ಮರಣ ಪ್ರಮಾಣವು ದಾಪುಗಾಲು ಇಡುತ್ತಿದ್ದು, ಸೋಮವಾರ ಮತ್ತೆ ಏಳು ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 176ಕ್ಕೆ ಏರಿದೆ.

ಸೋಮವಾರ ಮೃತಪಟ್ಟ ಸೋಂಕಿತರೆಲ್ಲ ಮಂಗಳೂರು ತಾಲೂಕಿನವರೇ ಆಗಿದ್ದಾರೆ. ಮೃತರ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ಸರ್ವ ಕ್ರಮ ಕೈಗೊಂಡಿದೆ. ಕೋವಿಡ್ ವಿಚಾರದಲ್ಲಿ ದ.ಕ. ಜಿಲ್ಲೆಗೆ ಮತ್ತೆ ಆಘಾತ ಎದುರಾಗಿದ್ದು, ರವಿವಾರವಷ್ಟೇ 10 ಮಂದಿ ಸೋಂಕಿತರು ಮೃತಪಟ್ಟಿದ್ದರು. ಮೃತರ ಸಂಖ್ಯೆಯಲ್ಲಿ ತೀರಾ ಏರಿಕೆಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭೀತಿ ಮೂಡಿಸಿದೆ.

153 ಮಂದಿಗೆ ಸೋಂಕು

ಕೊರೋನ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಹೊಸದಾಗಿ 153 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,168ಕ್ಕೆ ಏರಿಕೆಯಾಗಿದೆ.

ಸೋಂಕಿತರ ಸಂಖ್ಯೆಯಲ್ಲೂ ಮಂಗಳೂರೇ ಅಗ್ರಗಣ್ಯ ಸ್ಥಾನ ಪಡೆದಿದೆ. ಮಂಗಳೂರು-119, ಬಂಟ್ವಾಳ-11, ಬೆಳ್ತಂಗಡಿ- ಆರು, ಪುತ್ತೂರು-ನಾಲ್ಕು, ಸುಳ್ಯ-ಒಂದು, ಹೊರಜಿಲ್ಲೆಯ 12 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕಿತರನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

124 ಮಂದಿ ಡಿಸ್ಚಾರ್ಜ್: ಜಿಲ್ಲೆಯ ವಿವಿಧ ಆಸ್ಪತ್ರೆಗಳು, ಆರೈಕೆ ಕೇಂದ್ರ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 124 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರ ಸಂಖ್ಯೆ 2,854ಕ್ಕೇರಿದೆ. ಜಿಲ್ಲೆಯಲ್ಲಿ 3,138 ಸಕ್ರಿಯ ಪ್ರಕರಣಗಳಿವೆ.

ಸೋಂಕಿತರಲ್ಲಿ ಶೇ.71ರಷ್ಟು ಮಂಗಳೂರಿಗರು

ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರು ಹೆಚ್ಚುತ್ತಿದ್ದು, ಆರು ಸಾವಿರದ ಗಡಿ ದಾಟಿದೆ. ಒಟ್ಟು ಸೋಂಕಿತರ ಪೈಕಿ ಮಂಗಳೂರು ತಾಲೂಕಿನವರೇ ಹೆಚ್ಚಿನ ಪ್ರಮಾಣದಲ್ಲಿರುವುದು ಜಿಲ್ಲಾಡಳಿತದ ಅಂಕಿ-ಅಂಶದಿಂದ ತಿಳಿದುಬಂದಿದೆ.

ಸೋಮವಾರ ಬಿಡುಗಡೆಯಾದ ವರದಿಯಂತೆ ದ.ಕ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,168 ಇದೆ. ಈ ಪೈಕಿ ಮಂಗಳೂರು ತಾಲೂಕಿನಲ್ಲೇ ಅಧಿಕ ಸಂಖ್ಯೆಯ ಸೋಂಕಿತರು ಇದ್ದಾರೆ. ದ್ವಿತೀಯ ಸ್ಥಾನದಲ್ಲಿ ಬಂಟ್ವಾಳ ತಾಲೂಕು ಇದ್ದರೆ, ತೃತೀಯ ಮತ್ತು ಚತುರ್ಥ ಸ್ಥಾನವನ್ನು ಕ್ರಮವಾಗಿ ಪುತ್ತೂರು, ಬೆಳ್ತಂಗಡಿ ಪಡೆದಿವೆ. ಹೊರ ಜಿಲ್ಲೆಯಿಂದ ಚಿಕಿತ್ಸೆಗೆ ದ.ಕ.ಜಿಲ್ಲೆಯನ್ನು ಆಶ್ರಯಿಸಿದವರ ಸಂಖ್ಯೆಯೂ ಮೂರಂಕಿಯಲ್ಲಿದೆ ಎನ್ನುವುದು ಗಮನಾರ್ಹ.

ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಪೈಕಿ 4,394 ಮಂದಿ ಮಂಗಳೂರು ತಾಲೂಕಿವರಾಗಿದ್ದಾರೆ. ಇನ್ನುಳಿದಂತೆ ಬಂಟ್ವಾಳ-571, ಪುತ್ತೂರು-267, ಬೆಳ್ತಂಗಡಿ-260, ಮೂಡುಬಿದಿರೆ-93, ಮುಲ್ಕಿ-90, ಸುಳ್ಯ-72, ಕಡಬ-53, ಹೊರಜಿಲ್ಲೆಯ 368 ಮಂದಿ ಸೋಂಕಿತರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News