ಆ. 20ರ ಬಳಿಕ ಯುಎಇಗೆ ಐಪಿಎಲ್ ತಂಡಗಳು ತೆರಳುವ ಸಾಧ್ಯತೆ

Update: 2020-08-03 18:22 GMT

ಮುಂಬೈ, ಆ.3: ಹದಿಮೂರನೇ ಆವೃತ್ತಿಯ ಐಪಿಎಲ್‌ನಲ್ಲಿ ಕೋವಿಡ್-19 ಶಿಷ್ಟಾಚಾರಗಳನ್ನು ಜಾರಿಗೊಳಿಸುವ ಸಾಧ್ಯತೆಯಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಆಡಳಿತ ಮಂಡಳಿ(ಜಿಸಿ)ಒಂದು ವಾರ ವಿಳಂಬವಾಗಿ ಯುಎಇಗೆ ಪ್ರಯಾಣಿಸುವಂತೆ ಫ್ರಾಂಚೈಸಿಗಳು ಹಾಗೂ ಇತರ ಭಾಗಿದಾರರಿಗೆ ತಿಳಿಸಲು ನಿರ್ಧರಿಸಿದೆ. ಹೀಗಾಗಿ ಐಪಿಎಲ್ ತಂಡಗಳು ಆಗಸ್ಟ್ 20ರ ಬಳಿಕವೇ ಯುಎಇಗೆ ತೆರಳುವ ಸಾಧ್ಯತೆಯಿದೆ.

ದೀಪಾವಳಿಯ ಹಿನ್ನೆಲೆಯಲ್ಲಿ ಪ್ರಸಾರ ಸಂಸ್ಥೆ ಸ್ಟಾರ್ ಇಂಡಿಯಾಕ್ಕೆ ಇನ್ನೂ ಎರಡು ಹೆಚ್ಚುವರಿ ದಿನವನ್ನು ಒದಗಿಸುವ ಉದ್ದೇಶದಿಂದ ಐಪಿಎಲ್ ಫೈನಲ್ ಪಂದ್ಯವನ್ನು ನವೆಂಬರ್ 8ರಿಂದ 10ಕ್ಕೆ ಮುಂದೂಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಪಂದ್ಯಗಳು ರಾತ್ರಿ 8ರ ಬದಲಿಗೆ 7:30ಕ್ಕೆ ಆರಂಭವಾಗಲಿವೆ. ಯುಎಇಯಲ್ಲಿ ಸಂಜೆ ಆರು ಗಂಟೆಗೆ ಪಂದ್ಯಗಳು ಆರಂಭವಾಗುತ್ತವೆ.

ರವಿವಾರ ಆಡಳಿತ ಮಂಡಳಿ ಸದಸ್ಯರ ನಡುವೆ ನಡೆದಿದ್ದ ಚರ್ಚೆಯಲ್ಲಿ ಆಗಸ್ಟ್ 20ರಂದು ಯುಎಇಗೆ ತೆರಳುವಂತೆ ಐಪಿಎಲ್ ಭಾಗಿದಾರರಿಗೆ ವಿನಂತಿಸಿಕೊಳ್ಳುವುದರತ್ತ ಹೆಚ್ಚಿನ ಗಮನ ನೀಡಲು ನಿರ್ಧರಿಸಲಾಗಿದೆ.

ಹೆಚ್ಚಿನ ಫ್ರಾಂಚೈಸಿಗಳು ಆಗಸ್ಟ್ ಎರಡನೇ ವಾರ 10 ಹಾಗೂ 15ನೇ ತಾರೀಖಿನ ಮಧ್ಯೆ ಯುಎಇಗೆ ಪ್ರಯಾಣಿಸಲು ಯೋಜನೆ ಹಾಕಿಕೊಂಡಿದ್ದವು. ಈಗಾಗಲೇ ಯುಎಇಗೆ ಪ್ರಯಾಣಿಸಲು ಹಾಗೂ ಅಲ್ಲಿ ಉಳಿದುಕೊಳ್ಳುವ ಕುರಿತಂತೆ ತಯಾರಿಯನ್ನು ಆರಂಭಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News