ಭಟ್ಕಳದಲ್ಲಿ ಪ್ರಾಥಮಿಕ ಕೋವಿಡ್ ಸೆಂಟರ್ : ಡಾ.ಯೂಸೂಫ್ ಕುಂಬ್ಳೆ ಉದ್ಘಾಟನೆ

Update: 2020-08-04 16:56 GMT

ಭಟ್ಕಳ: ಇಂಡಿಯನ್ ನವಾಯತ್ ಫೋರಂ, ಮಜ್ಲಿಸೆ-ಇಸ್ಲಾಹ್-ವ-ತಂಝೀಮ್ ಹಾಗೂ ರಾಬಿತಾ ಸೂಸೈಟಿ ಆಶ್ರಯದಲ್ಲಿ ಮಂಗಳವಾರ ಇಲ್ಲಿನ ಝೈನ್ ಲಾಡ್ಜ್ ನಲ್ಲಿ ಪ್ರಾಥಮಿಕ ಕೋವಿಡ್ ಸೆಂಟರನ್ನು ಮಂಗಳೂರು ಇಂಡಿಯಾನ ಆಸ್ಪತ್ರೆಯ ನಿರ್ದೇಶಕ ಡಾ. ಯೂಸೂಫ್ ಕುಂಬ್ಳೆಯವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕೋವಿಡ್ ಗುಣಮುಖವಾಗುವ ರೋಗವಾಗಿದ್ದು ಇದರಿಂದಾಗಿ ಯಾರೂ ಕೂಡ ಭಯಪಡಬೇಕಾಗಿಲ್ಲ. ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರಿಕ್ಷೆಗೊಳಗಾಗುವುದರಿಂದ ಇದನ್ನು ತ್ವರಿತಗತಿಯಲ್ಲಿ ಗುಣಪಡಿಸಬಹುದಾಗಿದೆ ಎಂದರು. ಕೊನೆಯ ಹಂತದಲ್ಲಿ ಯಾವುದೇ ರೋಗವಾದರೂ ಚಿಕತ್ಸೆ ಕಷ್ಟವಾಗಿದ್ದು ಕೊನೆಯ ಹಂತದ ವರೆಗೆ ಕಾಯದೆ ರೋಗಲಕ್ಷಣ ಕಂಡು ಬಂದಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದ ಅವರು ಈಗ ಭಟ್ಕಳದಲ್ಲಿ ಪ್ರಾಥಮಿಕ ಕೋವಿಡ್ ಸೆಂಟರ್ ಆಗಿರುವುದರಿಂದಾಗಿ ಅಮ್ಲಜನಕದ ತೊಂದರೆಯನ್ನು ಎದುರಿಸುವವರಿಗೆ ಇಲ್ಲಿಯೆ ಆಮ್ಲಜನಕ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು, ಇಂಡಿಯಾನ ಆಸ್ಪತ್ರೆಯು ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದು ಎಂದರು.

ಮರ್ಕಝಿ ಖಲೀಫಾ ಜಮಾಅತುಲ್ ಮುಸ್ಲಿಮೀನ್ ಇದರ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ಮಾತನಾಡಿ, ಎಲ್ಲ ಜೀವಿಗಳ ಅವಶ್ಯಕತೆಗಳನ್ನು ಪೂರೈಸುವುದು ಮನುಷ್ಯರ ಧರ್ಮವಾಗಬೇಕು, ಮಾನವರ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಮಾಅತುಲ್ ಮುಸ್ಲಿಮೀನ್ ಉಪ ಖಾಝಿ ಮೌಲಾನ ಅಬ್ದುಲ್ ರಬ್ ನದ್ವಿ, ಸಹಾಯಕ ಆಯುಕ್ತ ಭರತ್ ಎಸ್, ಎ.ಎಸ್.ಪಿ ನಿಖಿಲ್ ಬಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಇನಾಯತುಲ್ಲಾ ಶಾಬಂದ್ರಿ, ಕೋವಿಡ್ ಸೆಂಟರ್ ಸಂಚಾಲಕರಾದ ಅರ್ಷದ್ ಮೊಹತೆಶಮ್, ಅತಿಕುರ್ರಹ್ಮಾನ್ ಮುನಿರಿ, ಗುಫ್ರಾನ್ ಲಂಕಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಾಥಮಿಕ ಕೋವಿಡ್ ಕೇಂದ್ರವು 28 ಹಾಸಿಗೆಗಳನ್ನು ಹೊಂದಿದ್ದು ಕೋವಿಡ್ ಸೋಂಕಿತರಿಗೆ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಲು 3 ನುರಿತ ವೈದ್ಯರು ಹಾಗೂ 8 ನರ್ಸ್‍ಗಳು ದಿನದ 24 ಗಂಟೆಯೂ ಸೇವೆಯಲ್ಲಿರುತ್ತಾರೆ ಎಂದು ಇಂಡಿಯನ್ ನವಾತ್ ಫೋರಂ ನ ಗುಫ್ರಾನ್ ಲಂಕಾ ಮಾಧ್ಯಮಗಳಿಗೆ ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News