‘ನಿಮ್ಮಂತಹವರು ಸಂಸತ್ ನಲ್ಲಿ ಕುಳಿತಿದ್ದಾರೆ ಎನ್ನುವುದೇ ನಾಚಿಕೆಗೇಡು’: ತೇಜಸ್ವಿ ಸೂರ್ಯಗೆ ಟ್ವಿಟರಿಗರ ಛೀಮಾರಿ

Update: 2020-08-05 08:54 GMT

ಬೆಂಗಳೂರು: ಆಡಳಿತವು ಹಿಂದೂಗಳ ಕೈಗಳಲ್ಲಿರಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಮಾಡಿರುವ ಟ್ವೀಟ್ ವಿವಾದ ಸೃಷ್ಟಿಸಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿಪೂಜೆಯ ದಿನವಾದ ಇಂದು ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, “ಪ್ರೀತಿಯ ಹಿಂದೂಗಳೇ, ಧರ್ಮ ಉಳಿಯಲು ಆಡಳಿತದ ನಿಯಂತ್ರಣ ಹಿಂದೂಗಳ ಕೈಗಳಲ್ಲಿರಬೇಕು ಎನ್ನುವುದು ಪ್ರಮುಖ ಪಾಠ. ನಮ್ಮಲ್ಲಿ ಯಾವಾಗ ಅಧಿಕಾರದ ನಿಯಂತ್ರಣವಿರಲಿಲ್ಲವೋ, ನಾವು ದೇವಸ್ಥಾನವನ್ನು ಕಳೆದುಕೊಂಡೆವು. ನಮಗೆ ಅಧಿಕಾರ ಮತ್ತೆ ಸಿಕ್ಕಿದಾಗ ನಾವು ನಿರ್ಮಿಸಿದೆವು. 2014ರಲ್ಲಿ 282 ಮತ್ತು 2019ರಲ್ಲಿ 303, ನರೇಂದ್ರ ಮೋದಿ ಸಾಧ್ಯವಾಗಿಸಿದರು” ಎಂದಿದ್ದಾರೆ.

ಸಂಸದರ ಈ ವಿವಾದಾತ್ಮಕ ಟ್ವೀಟ್ ಬಗ್ಗೆ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಛೀಮಾರಿ ಹಾಕಿದ್ದಾರೆ.

“ಕೃಷ್ಣ ಅಥವಾ ರಾಮ ಧರ್ಮವನ್ನು ಉಳಿಸಿದ್ದು, ಅಧಿಕಾರ ಅಥವಾ ಆಡಳಿತದ ನಿಯಂತ್ರಣದಿಂದಲ್ಲ, ಶಾಸ್ತ್ರ ಮತ್ತು ಸೇವೆಯಿಂದ. ದೇವರು ಧರ್ಮವನ್ನು ರಕ್ಷಿಸುತ್ತಾನೆ. ಹಲವು ಮೋದಿಗಳು ಬಂದು ಹೋಗಬಹುದು. ಆದರೆ ಸನಾತನ ಯಾವತ್ತಿಗೂ ಸನಾತನವಾಗಿ ಉಳಿಯಲಿದೆ” ಎಂದು ರಾಹುಲ್ ಗಾಖರ್ ಎಂಬವರು ಟ್ವೀಟ್ ಮಾಡಿದ್ದಾರೆ.

“ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವುದನ್ನು ನಿಲ್ಲಿಸಿ. ಮಸೀದಿ, ಮಂದಿರ, ಚರ್ಚ್, ಗುರುದ್ವಾರ ಒಂದೇ ಜಾಗದಲ್ಲಿರಲಿ” ಎಂದು ಅಪರ್ಣಾ ಎಂಬವರು ಟ್ವೀಟ್ ಮಾಡಿದ್ದಾರೆ.

“ಭಾರತದ ಪರಿಕಲ್ಪನೆಯನ್ನು ರಕ್ಷಿಸುತ್ತೇನೆಂದು ಪವಿತ್ರ ಭಾರತದ ಸಂವಿಧಾನದ ಮೇಲೆ ಮಾಡಿದ್ದ ಪ್ರಮಾಣವನ್ನು ತೇಜಸ್ವಿ ಸೂರ್ಯ ಮುರಿದಿದ್ದಾರೆ. ಭಾರತದ ಸಂವಿಧಾನವನ್ನು ರಕ್ಷಿಸುತ್ತೇವೆಂದು ನೀವು ಮಾಡಿದ ಪ್ರಮಾಣದ ಪ್ರಕಾರ ಈ ಮನುಷ್ಯನನ್ನು ಸಂಸದರ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಟ್ವೀಟ್ ಮಾಡಿರುವ ಲಿಯೋ ಸಲ್ಡಾನ ರಾಷ್ಟ್ರಪತಿ ಭವನ ಮತ್ತು ಉಪರಾಷ್ಟ್ರಪತಿಯವರನ್ನು ಟ್ಯಾಗ್ ಮಾಡಿದ್ದಾರೆ.

“ಒಬ್ಬ ಸಂಸದ ಇದನ್ನು ಹೇಳುತ್ತಿದ್ದಾರೆ. ನಿಮಗೆ ಮತ ಹಾಕಿದವರು ಕೇವಲ ಹಿಂದೂಗಳು ಮಾತ್ರವಲ್ಲ. ನಿಮ್ಮಂತಹ ಸಂಸದರು ಸಂಸತ್ ನಲ್ಲಿ ಕುಳಿತಿದ್ದಾರೆ ಎನ್ನುವುದೇ ನಾಚಿಕೆಗೇಡು. ಭಾರತ ಹಿಂದೂಗಳಿಗೆ ಮಾತ್ರವಲ್ಲ. ನೀವೆಷ್ಟೇ ಪ್ರಯತ್ನಪಟ್ಟರೂ, ಇದು ತಮ್ಮನ್ನು ಭಾರತೀಯ ಎಂದು ಕರೆದುಕೊಳ್ಳುವ ಪ್ರತಿಯೊಬ್ಬರಿಗೂ ಇರುವಂತಹದ್ದು” ಎಂದು ಶ್ರೀನಾಥ್ ಮೆನನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News