ಕೋವಿಡ್ 19 ಸೋಂಕಿತ ತಾಯಂದಿರು ಮಗುವಿಗೆ ಎದೆಹಾಲು ನೀಡುವುದನ್ನು ಮುಂದುವರಿಸಬೇಕು: ಕೇಂದ್ರ ಸಚಿವಾಲಯ

Update: 2020-08-05 14:15 GMT

ಹೊಸದಿಲ್ಲಿ: ತಾಯಂದಿರು ಕೋವಿಡ್ ಪಾಸಿಟಿವ್ ಆಗಿದ್ದರೂ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಿ ಮಗುವಿಗೆ ಎದೆಹಾಲು ನೀಡುವುದನ್ನು ಮುಂದುವರಿಸಲು ಅವರನ್ನು ಉತ್ತೇಜಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ವೈದ್ಯಕೀಯ ಸೇವೆ ಕ್ಷೇತ್ರದಲ್ಲಿರುವ ಎಲ್ಲಾ ಸಂಬಂಧಿತರಿಗೂ ಸೂಚಿಸಿದೆ.

ತಾಯಿಗೆ ಕೋವಿಡ್ 19 ಸೋಂಕು ಇದ್ದರೂ ಎದೆಹಾಲು ಸೇವನೆಯಿಂದ ಮಗುವಿಗೆ ರಕ್ಷಣೆ ದೊರೆಯಲು ಸಹಕಾರಿಯಾಗುವುದು ಎಂದು ಹೇಳಿರುವ ಸಚಿವಾಲಯ, ಕೋವಿಡ್ ಶಂಕಿತರು ಹಾಗೂ ಕೋವಿಡ್ ಸೋಂಕಿತ ತಾಯಂದಿರು ಮಗುವಿಗೆ ಎದೆ ಹಾಲು ನೀಡುವಾಗ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ.

ತಾಯಿಯ ಅಮ್ನಿಯಾಟಿಕ್ ದ್ರವ ಅಥವಾ ಎದೆ ಹಾಲಿನಲ್ಲಿ ಕೊರೋನವೈರಸ್ ಇಲ್ಲಿಯವರೆಗೆ ಕಂಡುಬಂದಿಲ್ಲ ಹಾಗೂ  ಇದರಿಂದಾಗಿ ಗರ್ಭಾವಸ್ಥೆ ವೇಳೆ ಅಥವಾ ಎದೆ ಹಾಲು ಕುಡಿಯುವಾಗ ಮಗುವಿಗೆ ಸೋಂಕು ಹರಡುವ ಸಾಧ್ಯತೆಯಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಮಗುವನ್ನು ಮುಟ್ಟುವ ಮೊದಲು ಹಾಗೂ ಮುಟ್ಟಿದ ನಂತರ ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‍ ನಿಂದ ಚೆನ್ನಾಗಿ ತೊಳೆಯಬೇಕು. ಒಂದು ವೇಳೆ ಮಗುವಿಗೆ ಬಾಟಲಿಯಲ್ಲಿ ಹಾಲು ನೀಡುವುದಾದರೂ ತಾಯಂದಿರು ಅಥವಾ ಮಗುವನ್ನು ನೋಡಿಕೊಳ್ಳುವವರು ಬಾಟಲಿಯನ್ನು ಮುಟ್ಟುವ ಮೊದಲು ತಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ.

ಆಗಸ್ಟ್ 1ರಿಂದ 7 ರನಕ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿರುವ ಸಂದರ್ಭ ಸಚಿವಾಲಯದ ಈ  ಹೇಳಿಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News