​ಪಡುಬಿದ್ರೆಯಲ್ಲಿ ತೀವ್ರಗೊಂಡ ಕಡಲ್ಕೊರೆತ

Update: 2020-08-05 16:38 GMT

ಪಡುಬಿದ್ರೆ, ಆ.5: ಮಳೆಯಿಂದ ಜೋರಾದ ಗಾಳಿಯೂ ಬೀಸುತ್ತಿರುವು ದರಿಂದ ಕಳೆದ ರಾತ್ರಿಯಿಂದ ಪಡುಬಿದ್ರೆಯಲ್ಲಿ ಕಡಲ್ಕೊರೆತ ಉಂಟಾಗಿದೆ.

ಪಡುಬಿದ್ರಿ, ಬೀಚ್, ಕಾಡಿಪಟ್ಣ, ನಡಿಪಟ್ಣದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಪಡುಬಿದ್ರಿ ಬೀಚ್‌ನಲ್ಲಿ ಕಳೆದ ತಿಂಗಳು ಮಳೆ ಉಂಟಾದಾಗ ಭಾಗಶಃ ಹಾನಿಯಾಗಿದ್ದ ಪಡುಬಿದ್ರಿ ಬೀಚ್ ಪರಿಸರದಲ್ಲಿ ಮತ್ತೆ ಕಡಲ್ಕೊರೆತ ಕಾಣಿಸಿಕೊಂಡಿದೆ. ಇಲ್ಲಿ ಕಾಂಕ್ರೀಟ್ ತಡೆಗೋಡೆ ಹಾಗೂ ಇಂಟರ್‌ ಲಾಕ್‌ಗೆ ಹಾನಿಯಾಗಿವೆ. ಬುಧವಾರ ಕಾಂಕ್ರೀಟ್ ತಡೆಗೋಡೆಯೊಂದಿಗೆ ತೆಂಗಿನ ಮರ ಗಳೂ ಕಡಲಿನ ಒಡಲು ಸೇರಿದ್ದು, ಇನ್ನೂ ಹಲವು ತೆಂಗಿನ ಮರಗಳು ಕಡಲು ಸೇರುವ ಭೀತಿಯಲ್ಲಿವೆ.

ಕಾಡಿಪಟ್ಣದಲ್ಲೂ ಕಡಲ್ಕೊರೆತ ತೀವ್ರಗೊಂಡಿದ್ದು ಈ ಭಾಗದಲ್ಲೂ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗುವ ಸಾಧ್ಯತೆ ಇದೆ. ಇಲ್ಲಿ ಕಡಲ ಅಲೆಗಳು ಭಾರೀ ಗಾತ್ರದಲ್ಲಿ ತೀರಕ್ಕೆ ಬಂದು ಮೀನುಗಾರಿಕಾ ರಸ್ತೆಗೆ ಅಪ್ಪಳಿಸುತ್ತಿದೆ. ಇದರಿಂದ ಮೀನುಗಾರಿಕಾ ರಸ್ತೆ ಅಪಾಯದಲ್ಲಿದೆ.
 ನಡಿಪಟ್ಣ ವಿಷ್ಣು ಭಜನಾ ಮಂದಿರದ ಬಳಿ ಕಡಲ್ಕೊರೆತ ಉಂಟಾಗಿದ್ದು, ಈ ಭಾಗದಲ್ಲಿ ಮಳೆಗಾಲದ ಆರಂಭದಲ್ಲಿ ಕಡಲ್ಕೊರೆತ ಉಂಟಾದಾಗ ನಿರ್ಮಿಸಿದ ತಾತ್ಕಾಲಿಕ ತಡಗೋಡೆ ಭಾರೀಗಾತ್ರದ ಅಲೆಗಳಿಗೆ ಸಮುದ್ರದ ಪಾಲಾಗಿದೆ. ಹತ್ತಾರು ತೆಂಗಿನ ಮರಗಳು, ಮೀನುಗಾರಿಕಾ ಶೆಡ್ ಹಾಗೂ ಮೀನುಗಾರಿಕಾ ರಸ್ತೆ ಅಪಾಯದಲ್ಲಿದೆ.

ಕುಂದಾಪುರ: ಕುಂದಾಪುರ ತಾಲೂಕಿನ ಗುಜ್ಜಾಡಿ, ಹೊಸಾಡು ಕಂಡುಗೋಡು ಗಳಲ್ಲಿ ಕಡಲ್ಕೊರೆತ ಜೋರಿದ್ದು, 20-25 ಮೀನುಗಾರರ ಮನೆಗಳು ಅಪಾಯದ ಕ್ಷಣಗಳನ್ನು ಎದುರಿಸುತ್ತಿದೆ. ಅದೇ ರೀತಿ ನದಿಗಳು ತುಂಬಿ ಹರಿಯುತ್ತಿರುವು ದರಿಂದ ನದಿ ತೀರದ ಮನೆಗಳವರೂ ಆತಂಕದ ಕ್ಷಣಗಳನ್ನು ಕಳೆಯುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News