ಬಿಜೆಪಿ ನಾಯಕ ದ್ವೇಷ ಭಾಷಣ ಪ್ರಕರಣ: ಶೀಘ್ರ ತೀರ್ಪು ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದ ಹೈಕೋರ್ಟ್

Update: 2020-08-06 11:36 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆಗಳನ್ನು ಉಲ್ಲೇಖಿಸಿ ದ್ವೇಷದ ಭಾಷಣಗಳನ್ನು ಮಾಡಿದ್ದ ಬಿಜೆಪಿ ನಾಯಕರುಗಳಾದ ಕಪಿಲ್ ಮಿಶ್ರಾ, ಅನುರಾಗ್ ಠಾಕುರ್, ಪರ್ವೇಶ್ ವರ್ಮ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರಿ ಸಿಪಿಎಂ ನಾಯಕಿ ಬೃಂದಾ ಕಾರಟ್ ಸಲ್ಲಿಸಿರುವ ಅಪೀಲಿನ ಕುರಿತಂತೆ ಶೀಘ್ರ ತೀರ್ಪು ನೀಡುವಂತೆ  ದಿಲ್ಲಿ ಹೈಕೋರ್ಟ್ ಬುಧವಾರದಂದು ಮೆಜಿಸ್ಟೀರಿಯಲ್ ನ್ಯಾಯಾಲಯಕ್ಕೆ ಸೂಚಿಸಿದೆ. 

ಈ ನಾಯಕರ ದ್ವೇಷದ ಭಾಷಣವು ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿತ್ತೆಂದು ಕಾರಟ್ ತಮ್ಮ ಅಪೀಲಿನಲ್ಲಿ ಆರೋಪಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಹಾಗೂ ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ಪೀಠ ಬೃಂದಾ ಕಾರಟ್ ಅವರ ಅಪೀಲಿನ ಕುರಿತು ಪ್ರತಿಕ್ರಿಯಿಸಿ ಅವರ ಅಪೀಲಿನ ವಿಚಾರಣೆ ನಡೆಸುತ್ತಿರುವ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ  ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದೆ. ಮ್ಯಾಜಿಸ್ಟೀರಿಯಲ್ ನ್ಯಾಯಾಲಯವು ಬೃಂದಾ ಕಾರಟ್ ಅವರ ಅಪೀಲಿನ ಮೇಲಿನ ಆದೇಶವನ್ನು ಕಾದಿರಿಸಿದ ನಂತರ ಅವರ ವಕೀಲರು ದಿಲ್ಲಿ ಹೈಕೋರ್ಟಿನ ಮೊರೆ ಹೋಗಿದ್ದರು.

ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಕಾನೂನು, ನೀತಿ ನಿಯಮಾವಳಿಗಳು ಹಾಗೂ ಅನ್ವಯವಾಗುವ ಸರಕಾರದ  ನೀತಿಗಳಂತೆ ಆದಷ್ಟು ಬೇಗ ಇತ್ಯರ್ಥಪಡಿಸಬೇಕೆಂದು ದಿಲ್ಲಿ ಹೈಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News