ಕೊರೋನ: ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ಯಾಕೇಜ್‌ನ ಎರಡನೇ ಕಂತು 890 ಕೋಟಿ ರೂ. ಬಿಡುಗಡೆ

Update: 2020-08-06 16:19 GMT

ಹೊಸದಿಲ್ಲಿ, ಆ.6: ಕೊರೋನ ಸೋಂಕಿನ ವಿರುದ್ಧ ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಯ ಸಿದ್ಧತೆಯ ಪ್ಯಾಕೇಜ್‌ನ ಎರಡನೇ ಕಂತಿನ ರೂಪದಲ್ಲಿ 22 ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 890.32 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಕೊರೋನ ಸೋಂಕಿನ ವಿರುದ್ಧ ನಡೆಸುವ ಹೋರಾಟಕ್ಕೆ ಪೂರಕವಾಗಿ ಕೇಂದ್ರ ಸರಕಾರ ಘೋಷಿಸಿರುವ 15,000 ಕೋಟಿ ರೂ. ಪ್ಯಾಕೇಜ್‌ನ ಎರಡನೇ ಕಂತು ಇದಾಗಿದೆ. ಎಪ್ರಿಲ್‌ನಲ್ಲಿ 3000 ಕೋಟಿ ರೂ. ಮೊತ್ತದ ಮೊದಲ ಕಂತು ಬಿಡುಗಡೆಯಾಗಿತ್ತು. ಮೊದಲ ಕಂತಿನ ನಿಧಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 5,80,342 ಐಸೊಲೇಷನ್ ಬೆಡ್‌ಗಳು, 1,36,068 ಆಮ್ಲಜನಕ ವ್ಯವಸ್ಥೆ ಸಹಿತ ಬೆಡ್‌ಗಳು ಹಾಗೂ 31,255 ಐಸಿಯು ಬೆಡ್‌ಗಳನ್ನು , 86,88,357 ಪರೀಕ್ಷಾ ಕಿಟ್‌ಗಳು, 79,88,366 ವೈರಲ್ ಟ್ರಾನ್ಸ್‌ಪೋರ್ಟ್ ಮೀಡಿಯ(ವಿಟಿಎಂ)ಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿರುವ ಕೊರೋನ ಸೋಂಕಿನ ಪ್ರಕರಣದ ಆಧಾರದಲ್ಲಿ ಆರ್ಥಿಕ ನೆರವಿನ ಪ್ರಮಾಣವನ್ನು ನಿರ್ಧರಿಸಲಾಗುವುದು. ಕೊರೋನ ಸೋಂಕು ಪರೀಕ್ಷೆಗೆ ಅಗತ್ಯವಿರುವ ಮೂಲಸೌಕರ್ಯ ಬಲಪಡಿಸಲು, ಆರ್‌ಟಿ-ಪಿಸಿಆರ್ ಯಂತ್ರಗಳ ಖರೀದಿ ಮತ್ತು ಅಳವಡಿಕೆ, ಆರ್‌ಎನ್‌ಎ ಸಂಗ್ರಹ ಕಿಟ್‌ಗಳು, ಟ್ರೂನ್ಯಾಟ್ ಮತ್ತು ಸಿಬಿ-ಎನ್‌ಎಎಟಿ ಯಂತ್ರಗಳು, ಐಸಿಯು ಬೆಡ್‌ಗಳ ಸ್ಥಾಪನೆಗೆ ಮೂಲಸೌಕರ್ಯ ಒದಗಿಸುವುದು, ಆಕ್ಸಿಜನ್ ಜನರೇಟರ್‌ಗಳ ಅಳವಡಿಕೆ, ಹಾಸಿಗೆಯ ಪಕ್ಕ ಅಳವಡಿಸುವ ಆಮ್ಲಜನಕ ಸಾಂದ್ರಕಗಳ ಖರೀದಿಗೆ ಎರಡನೇ ಕಂತಿನ ಹಣವನ್ನು ಬಳಸಬಹುದಾಗಿದೆ.

ಜೊತೆಗೆ, ಆರೋಗ್ಯಸೇವೆಗೆ ಅಗತ್ಯವಿರುವ ಸ್ವಯಂಸೇವಾ ಕಾರ್ಯಕರ್ತರು ಹಾಗೂ ಮಾನವ ಸಂಪನ್ಮೂಲದ (ಆಶಾ ಕಾರ್ಯಕರ್ತೆಯರ ಸಹಿತ) ನೇಮಕ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ಕೂ ಈ ನಿಧಿಯನ್ನು ಬಳಸಬಹುದು ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News