ಸಿಪಿಎಂನ ಹಿರಿಯ ನಾಯಕ ಶ್ಯಾಮಲ್ ಚಕ್ರವರ್ತಿ ನಿಧನ

Update: 2020-08-06 16:27 GMT
ಫೋಟೊ ಕೃಪೆ: Twitter

ಕೊಲ್ಕೊತ್ತಾ, ಆ. 6: ಕೊರೋನ ಸೋಂಕಿಗೆ ಒಳಗಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಶ್ಚಿಮಬಂಗಾಳದ ಸಿಪಿಎಂನ ಹಿರಿಯ ನಾಯಕ ಶ್ಯಾಮಲ್ ಚಕ್ರವರ್ತಿ (76) ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.

1982 ಹಾಗೂ 1996ರ ನಡುವೆ ಮೂರು ಬಾರಿ ಪಶ್ಚಿಮಬಂಗಾಳದ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಶ್ಯಾಮಲ್ ಚಕ್ರವತಿ ಅವರಿಗೆ ಕಳೆದ ತಿಂಗಳ ಅಂತ್ಯದಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಅವರನ್ನು ಇಲ್ಲಿನ ಪೀಯರ್‌ಲೆಸ್ ಆಸ್ಪತ್ರೆಯಲ್ಲಿ ಜುಲೈ 30ರಂದು ದಾಖಲಿಸಲಾಗಿತ್ತು. ಅನಂತರ ಆಗಸ್ಟ್ 1ರಂದು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅವರಿಗೆ ಇಂದು ಬೆಳಗ್ಗೆ ಹೃದಯಾಘಾತ ಸಂಭವಿಸಿತ್ತು.

ಅಪರಾಹ್ನ 1.50ಕ್ಕೆ ಮತ್ತೊಮ್ಮೆ ಸಂಭವಿಸಿದ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಶ್ಯಾಮಲ್ ಚಕ್ರವರ್ತಿ ಅವರು ವ್ಯಾಪಾರಿ ಒಕ್ಕೂಟದ ಹಾಗೂ ಸಿಐಟಿಯು ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಅಲ್ಲದೆ, ಅವರು ಸಿಪಿಎಂನ ಕೇಂದ್ರ ಸಮಿತಿಯ ಹಾಲಿ ಸದಸ್ಯರು. ಈ ಹಿಂದೆ ಅವರು ಸಿಪಿಎಂನ ರಾಜ್ಯಸಭಾ ಸದಸ್ಯ, ಸಿಐಟಿಯುನ ರಾಜ್ಯ ವರಿಷ್ಠ ಹಾಗೂ ಸಿಪಿಎಂ ರಾಜ್ಯ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಪುತ್ರಿ ಹಾಗೂ ನಟಿ ಉಶಾಸಿ ಚಕ್ರವರ್ತಿ ಅವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News