ದೋಷಾರೋಪಣ ಪಟ್ಟಿಗಳು, ತನಿಖೆಯ ಸ್ಥಿತಿಗತಿ ವರದಿ ಹಾಜರುಪಡಿಸಲು ಮಹಾರಾಷ್ಟ್ರಕ್ಕೆ ಸುಪ್ರೀಂ ನಿರ್ದೇಶ

Update: 2020-08-06 17:09 GMT

ಹೊಸದಿಲ್ಲಿ,ಆ.6: ಇಬ್ಬರು ಸಾಧುಗಳು ಸೇರಿದಂತೆ ಮೂವರನ್ನು ಗುಂಪೊಂದು ಥಳಿಸಿ ಹತ್ಯೆಗೈದಿದ್ದ ಪಾಲ್ಘರ್ ಪ್ರಕರಣದಲ್ಲಿ ಈವರೆಗೆ ಸಲ್ಲಿಸಲಾಗಿರುವ ದೋಷಾರೋಪಣ ಪಟ್ಟಿಗಳನ್ನು ಮೂರು ವಾರಗಳಲ್ಲಿ ತನ್ನೆದುರು ಹಾಜರುಪಡಿಸುವಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶ ನೀಡಿದೆ.

ಈ ವರ್ಷದ ಎಪ್ರಿಲ್ 16ರಂದು ಮುಂಬೈನ ಕಾಂದಿವಲಿ ನಿವಾಸಿಗಳಾದ ಇಬ್ಬರು ಸಾಧುಗಳು ಸಿಲ್ವಾಸಾಕ್ಕೆ ಪ್ರಯಾಣಿಸುತ್ತಿದ್ದಾಗ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡಕ್‌ಚಿಂಚಲೆ ಗ್ರಾಮದಲ್ಲಿ ಸ್ಥಳೀಯರ ಗುಂಪೊಂದು ಕಾರನ್ನು ತಡೆದು ನಿಲ್ಲಿಸಿತ್ತು ಮತ್ತು ಕಳ್ಳರೆಂಬ ಶಂಕೆಯಿಂದ ಚಾಲಕ ಸೇರಿದಂತೆ ಎಲ್ಲ ಮೂವರನ್ನು ದೊಣ್ಣೆ ಮತ್ತು ಕಬ್ಬಿಣದ ಸರಳುಗಳಿಂದ ಥಳಿಸಿ ಬರ್ಬರವಾಗಿ ಹತ್ಯೆ ಮಾಡಿತ್ತು. ಈ ಘಟನೆಯು ಭಾರೀ ಕೋಲಾಹಲವನ್ನು ಸೃಷ್ಟಿಸಿದ್ದು,35ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಲಾಗಿತ್ತು.

 ಪ್ರಕರಣದಲ್ಲಿಯ ದೋಷಾರೋಪಣ ಪಟ್ಟಿಗಳನ್ನು ತಾನು ಪರಿಶೀಲಿಸಬೇಕಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಅಶೋಕ ಭೂಷಣ ಮತ್ತು ಆರ್.ಸುಭಾಷ್ ರೆಡ್ಡಿ ಅವರ ಪೀಠವು ಘಟನೆಯಲ್ಲಿ ಪಾಲ್ಗೊಂಡಿದ್ದ ಆರೋಪಿ ಪೊಲೀಸರ ವಿರುದ್ಧ ತೆಗೆದುಕೊಂಡಿರುವ ಕ್ರಮದ ಕುರಿತು ಅಫಿಡವಿಟ್ ಅನ್ನು ಸಲ್ಲಿಸುವಂತೆಯೂ ಸೂಚಿಸಿತು. ಶ್ರೀ ಪಂಚ ದಶನಾಮ ಜೂನಾ ಅಖಾಡಾದ ಸಾಧುಗಳು ಮತ್ತು ಹತ ಸಾಧುಗಳ ಬಂಧುಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು.

ಅರ್ಜಿದಾರರ ಪರ ವಕೀಲ ಶಶಾಂಕ ಶೇಖರ ಝಾ ಅವರು,ಮಹಾರಾಷ್ಟ್ರ ಪೊಲೀಸರ ತನಿಖೆಯು ತಾರತಮ್ಯದಿಂದ ಕೂಡಿರುವುದರಿಂದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಆಗ್ರಹಿಸಿದರು. ನ್ಯಾಯವಾದಿ ಘನಶ್ಯಾಮ ಉಪಾಧ್ಯಾಯ ಅವರು ಸಲ್ಲಿಸಿರುವ ಇನ್ನೊಂದು ಅರ್ಜಿಯೂ,ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ನಿಗಾದಡಿ ತನಿಖೆ ನಡೆಯಬೇಕೆಂದು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News