927 ಹುದ್ದೆಗಳಿಗೆ 829 ಅಭ್ಯರ್ಥಿಗಳ ಫಲಿತಾಂಶ ಪ್ರಕಟ: ನೇಮಕಾತಿ ಹಗರಣ ಆರೋಪ ತಳ್ಳಿಹಾಕಿದ ಯುಪಿಎಸ್‌ಸಿ

Update: 2020-08-06 17:18 GMT

ಹೊಸದಿಲ್ಲಿ, ಆ.6: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಅಧಿಸೂಚನೆ ಹೊರಡಿಸಿದ್ದ ಹುದ್ದೆಗಳ ಸಂಖ್ಯೆಗಿಂತ ಕಡಿಮೆ ಪ್ರಮಾಣದಲ್ಲಿ ನೇಮಕಾತಿ ನಡೆಸಲಾಗಿದ್ದು , ಇದು ಪ್ರತಿಷ್ಟಿತ ಸರಕಾರಿ ಸೇವೆಗೆ ಹಿಂಬಾಗಿಲ ಮೂಲಕ ನೇಮಕ ನಡೆಸುವ ಉದ್ದೇಶದ ಹಗರಣ ಎಂಬ ಆರೋಪವನ್ನು ಯುಪಿಎಸ್‌ಸಿ ತಳ್ಳಿಹಾಕಿದೆ.

ಯುಪಿಎಸ್‌ಸಿ ಹಗರಣ ಎಂಬ ಹ್ಯಾಷ್‌ಟ್ಯಾಗ್‌ನಡಿ ಟ್ವಿಟರ್‌ನಲ್ಲಿ ತಪ್ಪು ಮಾಹಿತಿ ಪ್ರಸಾರವಾಗಿದೆ. ಅಧಿಸೂಚನೆಯಲ್ಲಿ ಸೂಚಿಸಿದ ಹುದ್ದೆಗಿಂತ ಕಡಿಮೆ ಪ್ರಮಾಣದ ನೇಮಕಾತಿ ಪ್ರಕ್ರಿಯೆ ಪ್ರಮಾಣಿತ ಕಾರ್ಯವಿಧಾನವಾಗಿದೆ. ಸಿವಿಲ್ ಸರ್ವಿಸ್ ಪರೀಕ್ಷಾ ನಿಯಮ 2019ರ 16(4) ಮತ್ತು (5)ರ ನಿಯಮದ ಪ್ರಕಾರ, ಪ್ರತಿಯೊಂದು ನೇಮಕಾತಿ ಸಂದರ್ಭವೂ ಮೀಸಲು ಪಟ್ಟಿಯನ್ನು ತಯಾರಿಸಲಾಗುತ್ತದೆ ಎಂದು ಯುಪಿಎಸ್‌ಸಿ ಹೇಳಿದೆ.

ಈ ಪ್ರಕಾರ, ಅಧಿಸೂಚಿತ 927 ಹುದ್ದೆಗಳಿಗೆ 829 ಅಭ್ಯರ್ಥಿಗಳ ಫಲಿತಾಂಶ ಬಿಡುಗಡೆಗೊಳಿಸಿದೆ. ಅಲ್ಲದೆ ಮೀಸಲು ಪಟ್ಟಿಯನ್ನೂ ತಯಾರಿಸಲಾಗಿದೆ. 2018ರಲ್ಲಿ ಅಧಿಸೂಚಿತ 812 ಹುದ್ದೆಗಳಿಗೆ 759 ಅಭ್ಯರ್ಥಿಗಳನ್ನು, 2017ರಲ್ಲಿ 1,058 ಹುದ್ದೆಗಳಿಗೆ 990 ಅಭ್ಯರ್ಥಿಗಳನ್ನು, 2016ರಲ್ಲಿ 1,209 ಹುದ್ದೆಗಳಿಗೆ 1,099 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ನಿಯಮದ ಪ್ರಕಾರ, ಮೀಸಲು ಪಟ್ಟಿಯ ವಿವರವನ್ನು ಬಹಿರಂಗಗೊಳಿಸುವಂತಿಲ್ಲ. ಮೀಸಲಾತಿ ವಿಭಾಗದ ಅಭ್ಯರ್ಥಿಗಳು ಸಾಮಾನ್ಯ ವಿಭಾಗದಲ್ಲಿ ಆಯ್ಕೆಯಾಗಿದ್ದು ಅವರು ಮೀಸಲಾತಿ ಸೌಲಭ್ಯದ ಹುದ್ದೆಯನ್ನು ಆಯ್ಕೆ ಮಾಡಲು ಬಯಸಿದರೆ, ಆಗ ಸಾಮಾನ್ಯ ವಿಭಾಗದಲ್ಲಿ ಖಾಲಿಯಾಗುವ ಹುದ್ದೆಯನ್ನು ಮೀಸಲಿರಿಸಿದ ಪಟ್ಟಿಯಿಂದ ಭರ್ತಿ ಮಾಡಲಾಗುತ್ತದೆ ಎಂದು ಯುಪಿಎಸ್‌ಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News