"ಮೊದಲು ಪರಿಹಾರ ನೀಡಿ, ನಂತರ ಪ್ರಕರಣ ವಾಪಸ್"

Update: 2020-08-07 12:14 GMT

ಹೊಸದಿಲ್ಲಿ: ಕೇರಳದ ಕರಾವಳಿಯಲ್ಲಿ 2012ರಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಗುಂಡಿಕ್ಕಿ ಸಾಯಿಸಿದ ಇಬ್ಬರು ಇಟಲಿಯ ನಾವಿಕರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಲಿ ಸರಕಾರ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವೊದಗಿಸಿದಲ್ಲಿ ಮಾತ್ರ ಈ ಕುರಿತಾದ ಕೋರ್ಟ್ ಪ್ರಕರಣವನ್ನು ಕೊನೆಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

“ಇಟಲಿ ಪರಿಹಾರ ನೀಡಲಿ. ಆಗಷ್ಟೇ ಪ್ರಕರಣ ವಾಪಸ್ ಪಡೆಯಲು ನಾವು ಅನುಮತಿಸುತ್ತೇವೆ,'' ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೇಳಿದ್ದಾರೆ.

ವಿಶ್ವ ಸಂಸ್ಥೆಯ ಟ್ರಿಬ್ಯುನಲ್ ನಿರ್ಧಾರದ ಹಿನ್ನೆಲೆಯಲ್ಲಿ ಪ್ರಕರಣ ವಾಪಸ್ ಪಡೆಯಬೇಕೆಂದು ಕೇಂದ್ರವು ಸುಪ್ರೀಂ ಕೋರ್ಟಿಗೆ ಮನವಿ  ಮಾಡಿತ್ತಲ್ಲದೆ ಇಬ್ಬರು ನಾವಿಕರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳುವ ಕುರಿತಂತೆ ಇಟಲಿ ಭರವಸೆ ನೀಡಿದೆ ಎಂದು ಹೇಳಿತ್ತು.

ಆದರೆ ಮೃತ ಮೀನುಗಾರರ ಕುಟುಂಬಗಳಿಗೆ ಮೊದಲು ಪರಿಹಾರ ದೊರೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಚೆಕ್‍ಗಳನ್ನು ಹಾಗೂ ಸಂತ್ರಸ್ತರ ಕುಟುಂಬಗಳನ್ನು ಇಲ್ಲಿಗೆ ಕರೆತನ್ನಿ,'' ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರು. ಹತ್ಯೆಗೀಡಾದ ಮೀನುಗಾರರ ಕುಟುಂಬಗಳನ್ನೂ ಈ ಪ್ರಕರಣದ ಭಾಗವಾಗಿಸುವ ನಿಟ್ಟಿನಲ್ಲಿ ಒಂದು ವಾರದೊಳಗೆ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ.

ಪ್ರಕರಣ ವಾಪಸ್ ಪಡೆಯುವ ಮೊದಲು ಹತ್ಯೆಗೀಡಾದವರ ಕುಟುಂಬಗಳನ್ನು ಆಲಿಸಬೇಕು ಎಂದೂ ನ್ಯಾಯಾಲಯ ತಿಳಿಸಿದೆ.

ಘಟನೆ ಫೆಬ್ರವರಿ 15, 2012ರಂದು ನಡೆದಿತ್ತು. ಆರೋಪಿಗಳ ವಿರುದ್ಧ ಕೇರಳದಲ್ಲಿ ಕಾನೂನು ಕ್ರಮ ಕೈಗೊಳ್ಳಬಹುದೆಂದು ಕೇರಳ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ನಾವಿಕರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News