"ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗವತ್ ಉಪಸ್ಥಿತಿಯು ಬಾಬರಿ ಮಸೀದಿ ಧ್ವಂಸದಲ್ಲಿ ಆರೆಸ್ಸೆಸ್ ಪಾತ್ರ ದೃಢೀಕರಿಸಿದೆ"

Update: 2020-08-07 15:06 GMT

ಹೊಸದಿಲ್ಲಿ, ಆ.7: ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಉಪಸ್ಥಿತಿ, ಬಾಬರಿ ಮಸೀದಿ ಧ್ವಂಸದಲ್ಲಿ ಆರೆಸ್ಸೆಸ್‌ನ ತಂಡವೂ ಶಾಮೀಲಾಗಿತ್ತು ಎಂಬ ತಮ್ಮ ನಿಲುವನ್ನು ದೃಢಪಡಿಸಿದೆ ಎಂದು ನ್ಯಾ ಮನಮೋಹನ್ ಸಿಂಗ್ ಲಿಬರ್‌ಹಾನ್ ಹೇಳಿರುವುದಾಗಿ The Times of India ವರದಿ ಮಾಡಿದೆ.

ಮನಮೋಹನ್ ಸಿಂಗ್ ಲಿಬರ್‌ಹಾನ್ 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ತನಿಖೆಗೆ ನೇಮಿಸಿದ್ದ ಆಯೋಗದ ನೇತೃತ್ವ ವಹಿಸಿದ್ದರು. 17 ವರ್ಷದ ಬಳಿಕ, 2009ರಲ್ಲಿ ಲಿಬರ್‌ಹಾನ್ ಆಯೋಗ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಮಸೀದಿ ಧ್ವಂಸ ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ನ ಕಾರ್ಯಕರ್ತರು ಶಾಮೀಲಾಗಿದ್ದರು ಎಂದು ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ಬಿಜೆಪಿಯ ಹಿರಿಯ ಮುಖಂಡರಾದ ಅಟಲ್ ಬಿಹಾರಿ ವಾಜಪೇಯಿ, ಎಲ್‌ಕೆ ಅಡ್ವಾಣಿ, ಕಲ್ಯಾಣ್ ಸಿಂಗ್, ಪ್ರಮೋದ್ ಮಹಾಜನ್ ಸಹಿತ ಹಲವರ ಹೆಸರನ್ನೂ ಉಲ್ಲೇಖಿಸಿತ್ತು.

ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಎಲ್ಲಾ ಸಮುದಾಯದವರ ಭಾವನೆಗಳನ್ನೂ ಪ್ರತಿನಿಧಿಸಿಲ್ಲ. ಸುಪ್ರೀಂಕೋರ್ಟ್ ಹಕ್ಕಿನ ಬಗ್ಗೆ ಮಾತ್ರ ನಿರ್ಧರಿಸಿದೆ. ತೀರ್ಪಿನ ಕುರಿತು ತನ್ನ ಅಭಿಪ್ರಾಯ ವಿಭಿನ್ನವಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಯಾವುದಾದರೂ ವಿಷಯದ ಮೇಲೆ ಭರವಸೆ ಇಡಬೇಕಾಗುತ್ತದೆ ಎಂದು ನ್ಯಾ ಲಿಬರ್‌ಹಾನ್ ಪ್ರತಿಕ್ರಿಯಿಸಿರುವುದಾಗಿ 'ಟೈಮ್ಸ್ ಆಫ್ ಇಂಡಿಯಾ'ದ ವರದಿ ತಿಳಿಸಿದೆ. ಲಿಬರ್‌ಹಾನ್ ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News