ಕೇರಳ: ರನ್ ವೇಯಿಂದ ಜಾರಿ ಇಬ್ಭಾಗವಾದ ವಿಮಾನ; ಪೈಲಟ್ ಸೇರಿ 14 ಮಂದಿ ಮೃತ್ಯು

Update: 2020-08-07 19:06 GMT
Photo: Twitter(@ndtv)

ಹೊಸದಿಲ್ಲಿ, ಆ. 7: ದುಬೈಯಿಂದ ಹಿಂದಿರುಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೋಝಿಕ್ಕೋಡ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕರಿಪುರ ವಿಮಾನ ನಿಲ್ದಾಣ)ದಲ್ಲಿ ಶುಕ್ರವಾರ ಸಂಜೆ ಇಳಿಯುವಾಗ ರನ್‌ವೇಯಲ್ಲಿ ಜಾರಿ ಕಣಿವೆಗೆ ಉರುಳಿ ಸಂಭವಿಸಿದ ದುರಂತದಲ್ಲಿ ಪೈಲೆಟ್ ಸಹಿತ 17 ಮಂದಿ ಮೃತಪಟ್ಟಿದ್ದಾರೆ. 112 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ವಿಮಾನದ ಪೈಲೆಟ್ ದೀಪಕ್ ವಸಂತ ಸಾಥೆ ಮೃತಪಟ್ಟಿದ್ದಾರೆ. ಸಹ ಪೈಲೆಟ್‌ನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರಾತ್ರಿ 8.15ರ ಹೊತ್ತಿಗೆ ಕೋಝಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದಂತೆ ಜಾರಿ ತಡೆಗೋಡೆಗೆ ಢಿಕ್ಕಿ ಹೊಡೆಯಿತು. ಅನಂತರ 35 ಅಡಿ ಆಳದ ಕಣಿವೆಗೆ ಉರುಳಿತು. ಇದರಿಂದ ವಿಮಾನ ಎರಡು ತುಂಡುಗಳಾಯಿತು ಎಂದು ನಾಗರಿಕ ವಿಮಾನ ಯಾನದ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ನೀಡಿದ ಹೇಳಿಕೆ ತಿಳಿಸಿದೆ.

ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

‘‘ಕರಿಪುರದ ಕೋಝಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತದ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ನಾನು ಪೊಲೀಸರು ಹಾಗೂ ಅಗ್ನಿ ಶಾಮಕ ದಳಕ್ಕೆ ಸೂಚನೆ ನೀಡಿದ್ದೇನೆ. ಪ್ರಯಾಣಿಕರನ್ನು ರಕ್ಷಿಸಲು ಹಾಗೂ ವೈದ್ಯಕೀಯ ನೆರವಿಗೆ ಅಗತ್ಯ ಇರುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ’’ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

‘‘ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುಬೈಯಿಂದ ಹಿಂದಿರುಗಿ ಕೋಝಿಕೋಡ್‌ನಲ್ಲಿ ರಾತ್ರಿ 8.15ಕ್ಕೆ ರನ್‌ವೇಯಲ್ಲಿ ಇಳಿಯುವ ಸಂದರ್ಭ ಜಾರಿ ದುರ್ಘಟನೆ ಸಂಭವಿಸಿದೆ. ಇಳಿಯುವ ಸಂದರ್ಭ ಯಾವುದೇ ರೀತಿಯ ಬೆಂಕಿ ಕಾಣಿಸಿಕೊಂಡಿಲ್ಲ. ವಿಮಾನದಲ್ಲಿ 10 ಮಕ್ಕಳು ಸೇರಿದಂತೆ 174 ಪ್ರಯಾಣಿಕರು, ಇಬ್ಬರು ಪೈಲೆಟ್‌ಗಳು, 5 ಕ್ಯಾಬಿನ ಸಿಬ್ಬಂದಿಗಳು ಇದ್ದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡ ಪ್ರಯಾಣಿಕರನ್ನು ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ’’ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಸ್ಥೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News