ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ನೇತ್ರಾವತಿ: ಬಂಟ್ವಾಳ ತಾಲೂಕಿನ ಹಲವು ಪ್ರದೇಶಗಳು ಜಲಾವೃತ

Update: 2020-08-08 07:10 GMT

ಬಂಟ್ವಾಳ, ಆ.8: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಬಂಟ್ವಾಳ ತಾಲೂಕಿನ ಹಲವು ಪ್ರದೇಶಗಳು ಜಲಾವೃತಗೊಂಡಿದೆ.

ನೇತ್ರಾವತಿ ನದಿಯಲ್ಲಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು ಶನಿವಾರ ಬೆಳಗ್ಗೆ 9 ಗಂಟೆ ವೇಳೆಗೆ ನೇತ್ರಾವತಿ ನದಿಯಲ್ಲಿ 9 ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿತ್ತು. ಮಧ್ಯಾಹ್ನ 12 ಗಂಟೆಯ ವೇಳೆ ನೀರಿನ ಮಟ್ಟ 9.2 ಮೀಟರ್ ಗೆ ಏರಿಕೆಯಾಗಿದೆ. ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದ್ದು ಇನ್ನಷ್ಟು ಪ್ರದೇಶಗಳು ಮುಳುಗಡೆಯಾಗುವ ಭೀತಿಯನ್ನು ಎದುರಿಸುತ್ತಿದೆ.

ತಾಲೂಕಿನ ತಗ್ಗು ಪ್ರದೇಶಗಳಾದ ಗೂಡಿನಬಳಿ, ಬಂಟ್ವಾಳ ರಸ್ತೆ, ಬಡ್ಡಕಟ್ಟೆ, ಅಜಿಲಮೊಗರು, ಆಲಡ್ಕ ಪಡ್ಪು, ಆಲಡ್ಕ, ಬೋಗೋಡಿ, ಪಾಣೆಮಂಗಳೂರು ಸಹಿತ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಈ ಪ್ರದೇಶಗಳ ಹಲವು ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದ್ದು, ಹಲವು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ತೆರವುಗೊಳಿಸಲಾಗಿದೆ.

ಶಂಭೂರು ಡ್ಯಾಂ ಈ ಮೊದಲೇ ಭರ್ತಿಯಾಗಿದ್ದು 14 ಗೇಟುಗಳನ್ನು ಶೇ.50ರಷ್ಟು ತೆರೆಯಲಾಗಿದೆ. ಆಗಾಗ ಸೈರನ್ ಮೊಳಗಿಸುವ ಮೂಲಕ ನೀರನ್ನು ಹೊರ ಬಿಡಲಾಗುತ್ತಿದೆ. ನೀರಿನ ಹರಿವು ಹೆಚ್ಚುತ್ತಿದ್ದು ಶಂಭೂರು ಡ್ಯಾಂನ ಕೆಳಗಿನ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News