ಮನೆಯೊಳಗೆ ಒಂದಿಂಚು ನೀರು ಬಂದರೂ 10,000 ಪರಿಹಾರ ನೀಡಿ: ಸಚಿವ ಅಶೋಕ್

Update: 2020-08-08 11:55 GMT

ಮಂಗಳೂರು, ಆ.8: ದ.ಕ. ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಮರ, ವಿದ್ಯುತ್ ಕಂಬ ಬಿದ್ದು, ಬಿರುಗಾಳಿಗೆ ಮನೆಯ ಮೇಲ್ಛಾವಣಿ ಹಾರಿ ಹಾನಿಯಾಗುವುದು ಸೇರಿದಂತೆ ಮನೆಯೊಳಗೆ ಒಂದಿಂಚು ನೀರು ಬಂದರೂ ತಕ್ಷಣ 10,000 ರೂ.ಗಳನ್ನು ನೀಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ದ.ಕ. ಜಿಲ್ಲೆಯ ಮಳೆ ಹಾನಿ ಪರಿಹಾರ, ಪ್ರವಾಹದ ಕುರಿತಂತೆ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆಯನ್ನು ನೀಡಿದರಲ್ಲದೆ, ಇದನ್ನು ಸರಕಾರದ ನಿರ್ದೇಶನವನ್ನಾಗಿ ಪಾಲಿಸುವಂತೆ ತಿಳಿಸಿದರು.

ಸಂತ್ರಸ್ತರ ಪರಿಹಾರದ ಬಗ್ಗೆ ಜಿಪುಣತನ ಬೇಡ!

ಪ್ರವಾಹದಿಂದ ಸಂತ್ರಸ್ತರಾದವರಿಗೆ ಆಶ್ರಯ ನೀಡಲಾಗುವ ಕಾಳಜಿ ಕೇಂದ್ರಗಳಲ್ಲಿ ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರವನ್ನು ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವ ಅಶೋಕ್, ಈ ಕುರಿತಂತೆ ಅಧಿಕಾರಿಗಳು ಜಿಪುಣತನ ತೋರಿಸಬಾರದು ಎಂದು ಸಲಹೆ ನೀಡಿದರು.

ಕಾಳಜಿ ಕೇಂದ್ರಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಒಂದೇ ರೀತಿಯ ಆಹಾರವನ್ನು ನೀಡಬಾರದು. ಅದನ್ನು ನಿರಂತರವಾಗಿ ಬದಲಿಸುತ್ತಿರಬೇಕು. ಪೌಷ್ಟಿಕವಾದ ಆಹಾರವನ್ನು ಒದಗಿಸಬೇಕು. ಪರಿಹಾರ ಕಾರ್ಯಗಳಿಗೆ ಹಣಕ್ಕೆ ತೊಂದರೆ ಇಲ್ಲ. ಪ್ರವಾಹ ಪರಿಹಾರಕ್ಕಾಗಿ ಈಗಾಗಲೇ ಜಿಲ್ಲೆಗೆ 5 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಜನರ ಕಷ್ಟದ ಸಂದರ್ಭ ಸರಕಾರ ಜತೆಗಿದೆ ಎನ್ನುವ ರೀತಿಯಲ್ಲಿ ಎಚ್ಚರಿಕೆ ವಹಿಸಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.

ಗ್ರಾಪಂ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚನೆಗೆ ಸೂಚನೆ

ಪ್ರವಾಹ, ಭೂಕುಸಿತ ಸಂದರ್ಭ ಜನರನ್ನು ಸುರಕ್ಷಿತ ತಾಣಗಳಿಗೆ ತಲುಪಿಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಗ್ರಾಪಂ ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಆಸಕ್ತ ಸ್ವಯಂಸೇವಕರನ್ನು ಒಳಗೊಂಡ ವಿಪತ್ತು ನಿರ್ವಹಣಾ ಸಮಿತಿಯನ್ನು ರಚಿಸುವಂತೆ ಸಚಿವ ಆರ್. ಅಶೋಕ್ ನಿರ್ದೇಶನ ನೀಡಿದರು.

ಸಮಿತಿಯ ಸದಸ್ಯರಿಗೆ ತರಬೇತಿ, ಸಭೆ ನಡೆಸಲು ಅಗತ್ಯವಾದ ಹಣವನ್ನು ಒದಗಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ಸ್ಥಳೀಯರನ್ನು ಮನವೊಲಿಸಿ ಪ್ರಾಣ ಕಾಪಾಡುವಲ್ಲಿ ಈ ಸಮಿತಿ ಸದಸ್ಯರು ಕಾರ್ಯ ನಿರ್ವಹಿಸಿ ಆಡಳಿತ ಯಂತ್ರದ ಜತೆ ಸಹಕರಿಸಲಿದ್ದಾರೆ. ಪೈಲಟ್ ಯೋಜನೆಯಾಗಿ ಜಿಲ್ಲೆಯಲ್ಲಿ ಈ ಕಾರ್ಯವನ್ನು ಮಾಡಬೇಕು. ರಾಜ್ಯದಲ್ಲಿ ಮಾದರಿಯಾಗಿ ಈ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದ್ದು, ಕೇಂದ್ರ ಸರಕಾರ ಇದರ ಬಗ್ಗೆ ಮಾಹಿತಿಯನ್ನು ಕೂಡಾ ಕೋರಿದೆ ಎಂದು ಸಚಿವ ಆರ್. ಅಶೋಕ್ ‌ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ರಾಜೇಶ್ ನಾಯ್ಕ್, ಬಂಟ್ವಾಳದಲ್ಲಿ ಈಗಾಗಲೇ ನೇತ್ರಾವತಿ ತುಂಬಿ ಹರಿಯುತ್ತಿದ್ದು ಗದ್ದೆ, ತೋಟಗಳಿಗೆ ನೀರು ನುಗ್ಗಿದೆ. ನೂರಾರು ಎಕರೆ ಮುಳುಗಡೆ ಆಗಿದೆ. ತಕ್ಷಣ ಪರಿಹಾರ ಬೇಕು ಎಂದು ಸಚಿವರ ಗಮನ ಸೆಳೆದರು.

ಗುರುಪುರದಲ್ಲಿ ಭೂಕುಸಿತವಾಗಿ ಹಲವಾರು ಕುಟುಂಬಗಳಿಗೆ ತೊಂದರೆಯಾಗಿದ್ದು, ಅಲ್ಲಿ ತಡೆಗೋಡೆಗೆ 5 ಕೋಟಿ. ರೂ.ಗಳನ್ನು ಒದಗಿಸಬೇಕೆಂದು ಶಾಸಕ ಉಮಾನಾಥ ಕೋಟ್ಯಾನ್ ಅವರ ಕೋರಿಕೆಗೆ, ಹಣ ಬಿಡುಗಡೆ ಮಾಡುವುದಾಗಿ ಸಚಿವ ಅಶೋಕ್ ತಿಳಿಸಿದರು.

ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಪ್ರತಾಪ್ ಸಿಂಹ ನಾಯಕ್ ತಮ್ಮ ಕ್ಷೇತ್ರಗಳಲ್ಲಿನ ಪ್ರವಾಹ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿ ತುರ್ತು ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಡಿಸಿಪಿ ಅರುಣಾಂಶಗಿರಿ, ಎಡಿಸಿ ರೂಪಾ ಉಪಸ್ಥಿತರಿದ್ದರು.


ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ

ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯಗಳಿಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಮುಂಚಿತವಾಗಿ 110 ಕೋಟಿ ರೂ. ಅನುದಾನ ನೀಡಿದ್ದರು. ಈ ಬಾರಿ 310 ಕೋಟಿ ರೂ.ನೀಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಪ್ರವಾಹ ಸೇರಿದಂತೆ ವಿಕೋಪಕ್ಕೆ ಸಂಬಂಧಿಸಿದ ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಸಂಭಾವ್ಯ ಭೂ ಕುಸಿತ, ಪ್ರವಾಹ ಪ್ರದೇಶಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಿ
 ದ.ಕ. ಜಿಲ್ಲೆಯಲ್ಲಿ ಸಂಭಾವ್ಯ ಭೂ ಕುಸಿತ, ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಆ ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ತಾಣಗಳಿಗೆ ಮುಂಚಿತವಾಗಿಯೇ ಸಾಗಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಅವರು ಒಪ್ಪದಿದ್ದರೂ ಬಲವಂತವಾಗಿಯಾದರೂ ಪೊಲೀಸರ ಸಹಕಾರದೊಂದಿಗೆ ದೂರು ನೀಡಿಯಾದರೂ ಅವರನ್ನು ಸ್ಥಳಾಂತರಿಸಿ ಅವರ ಪ್ರಾಣ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಅಧಿಕಾರಿಗಳು ಯಾವುದೇ ಸಬೂಬು ನೀಡಬಾರದು. ಕೊಡಗಿನಲ್ಲಾದ ಘಟನೆಯನ್ನು ನಾವು ಈಗಾಗಲೇ ನೋಡಿದ್ದೇವೆ. ಹಾಗಾಗಿ ಅನಾಹುತ ಸಂಭವಿಸುವ ಮೊದಲೇ ಮುಲಾಜಿಲ್ಲದೆ ಕ್ರಮ ಕೊಂಡು ಸರಕಾರಕ್ಕೆ ಕೆಟ್ಟ ಹೆಸರು ಬಾರದಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವ ಅಶೋಕ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News