ಮೀನಿನ ಉತ್ಪಾದನೆಯಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೇರಿಸುವ ಗುರಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2020-08-08 12:31 GMT

ಕುಂದಾಪುರ, ಆ.8: ರಾಜ್ಯದಲ್ಲಿ ಪ್ರಸ್ತುತ ವಾರ್ಷಿಕ 40 ಲಕ್ಷ ಮೀನು ಉತ್ಪಾದಿಸಲಾಗುತ್ತಿದೆ. ಸದ್ಯ ನಮ್ಮಲ್ಲಿ ಒಂದು ಕೋಟಿ ಮೀನಿನ ಮರಿಗಳಿಗೆ ಬೇಡಿಕೆ ಇದೆ. ಪಂಜರ ಮೀನಿನ ಕೃಷಿಯ ಮೂಲಕ ಈ ಕೊರತೆಯನ್ನು ನೀಗಿಸಲು ಪ್ರಯತ್ನಿಸಲಾಗುವುದು. ಈ ಮೂಲಕ ಮೀನಿನ ವಾರ್ಷಿಕ ಉತ್ಪಾದನೆ ಮತ್ತು ಆದಾಯದಲ್ಲಿ 4ನೇ ಸ್ಥಾನದಲ್ಲಿರುವ ಕರ್ನಾಟಕವನ್ನು ಪ್ರಥಮ ಸ್ಥಾನಕ್ಕೇರಿಸಲಾಗುವುದು ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಮೀನುಗಾರಿಕೆ ಇಲಾಖೆ ವತಿಯಿಂದ ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಪಂಜರ ಮೀನು ಕೃಷಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೊರೋನದಿಂದ ಹೊರ ದೇಶ ಹಾಗೂ ಮುಂಬೈಯಲ್ಲಿ ಉದ್ಯೋಗ ಬಿಟ್ಟು ಊರಿಗೆ ಬಂದಿರುವ ನೂರಾರು ಮಂದಿಗೆ ಸ್ವಉದ್ಯೋಗದಲ್ಲಿ ತೊಡಗಿಸಿ ಕೊಳ್ಳಲು ಪಂಜರ ಮೀನು ಕೃಷಿಯು ಉತ್ತಮ ಅವಕಾಶವಾಗಿದೆ. ಮುಂದಿನ ದಿನಗಳಲ್ಲಿ ಮೀನಿನ ವೌಲ್ಯವರ್ಧನೆಗೆ ಇನ್ನಷ್ಟು ಉತ್ತೇಜನ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ದ.ಕ.- ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಪೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಮಾತನಾಡಿ, ರಾಜ್ಯ ಸರಕಾರ ಮೀನುಗಾರರ ಅಭ್ಯುದಯಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಪಂಜರ ಮೀನು ಕೃಷಿ ಕೂಡ ಪ್ರಮುಖವಾದದು. ಇದರ ಸದುಪಯೋಗವನ್ನು ಎಲ್ಲೂ ಪಡೆಯಬೇಕು ಎಂದು ತಿಳಿಸಿದರು.

ಕೇಂದ್ರಿಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಪ್ರತಿಭಾ ರೋಹಿತ್ ಕಾರ್ಯಾಗಾರ ನಡೆಸಿಕೊಟ್ಟರು. ಜಿಪಂ ಸದಸ್ಯೆ ಲಕ್ಷ್ಮಿ ಮಂಜು ಬಿಲ್ಲವ, ಕುಂದಾಪುರ ತಾಪಂ ಪ್ರಭಾರ ಅಧ್ಯಕ್ಷ ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಪೈ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕಾ ಇಲಾಖೆಯ ರಾಜ್ಯ ನಿರ್ದೇಶಕ ರಾಮಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಪ ನಿರ್ದೇಶಕ ಗಣೇಶ್ ಕೆ. ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಜಿ.ಎಂ.ಶಿವಕುಮಾರ್ ವಂದಿಸಿದರು. ಕುಂದಾಪುರದ ಸಹಾಯಕ ನಿರ್ದೇಶಕ ಚಂದ್ರಶೇಖರ್ ಕಾರ್ಯ ಕ್ರಮ ನಿರೂಪಿಸಿದರು.

ಮೀನುಗಾರಿಕಾ ವಲಯದಲ್ಲಿ ಸ್ವಾವಲಂಬನೆ

ಮೀನುಗಾರರು ಬಳಸುವ ಮೀನುಗಾರಿಕಾ ಬಲೆ, ಬೋಟುಗಳ ಇಂಜಿನ್, ಸಲಕರಣೆಗಳು ಚೀನ ಸೇರಿದಂತೆ ಇತರ ದೇಶಗಳದ್ದಾಗಿದ್ದು, ಮುಂದಿನ ದಿನಗಳಲ್ಲಿ ಇವೆಲ್ಲವೂ ನಮ್ಮಲ್ಲಿಯೇ ಉತ್ಪಾದಿಸಲು ಒತ್ತು ನೀಡಲಾಗುವುದು. ಮೀನುಗಾರಿಕಾ ವಲಯವು ಬೇರೆ ದೇಶವನ್ನು ಆಶ್ರಯಿ ಸದೆ ಸಂಪೂರ್ಣ ಸ್ವಾವಲಂಬನೆಯಾಗುವಂತೆ ಯೋಜನೆ ರೂಪಿಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಎಲ್ಲ ಮೀನುಗಾರರಿಗೂ ಕಿಸಾನ್ ಕಾರ್ಡ್ ನೀಡುವ ಕಾರ್ಯ ಪ್ರಗತಿ ಯಲ್ಲಿದೆ. ಸರಕಾರದ ಸವಲತ್ತುಗಳು, ಬ್ಯಾಂಕ್ ಸಾಲ ಎಲ್ಲವೂ ಆ ಮೂಲಕ ಸಿಗುವಂತೆ ಮಾಡಲಾಗುುದು ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News