ಬಸ್ರೂರು ಮೂರುಕೈ ರಾ.ಹೆದ್ದಾರಿಯಲ್ಲಿ ಕೃತಕ ನೆರೆ : ಸಚಿವರ ಕಾರು ತಡೆದು ಸ್ಥಳೀಯರ ತೀವ್ರ ಆಕ್ರೋಶ

Update: 2020-08-08 12:33 GMT

ಕುಂದಾಪುರ, ಆ.8: ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಂದಾಪುರ ಬಸ್ರೂರು ಮೂರುಕೈನಿಂದ ವಿನಾಯಕ-ಕೋಡಿ ಜಂಕ್ಷನ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೃತಕ ನೆರೆ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ತೊಡಕಾಗಿದ್ದು, ಈ ಅವ್ಯವಸ್ಥೆಯನ್ನು ವಿರೋಧಿಸಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪದಾಧಿಕಾರಿಗಳು, ಶನಿವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ರಾ.ಹೆದ್ದಾರಿಯಲ್ಲಿ ಮಳೆ ನೀರು ನಿಂತು ಕೆರೆಯಂತಾಗಿದ್ದು, ಹೊಂಡ-ಗುಂಡಿ ಗಳಿಂದ ಶನಿವಾರ ಬೆಳಿಗ್ಗೆಯಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿತ್ತು. ಇದರಿಂದ ಕಿಲೋ ಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ಟ್ರಾಫಿಕ್ ಕಿರಿಕಿರಿ ಉಂಟಾಯಿತು.

ಇದೇ ವೇಳೆ ಕುಂದಾಪುರದಲ್ಲಿ ಮೀನುಗಾರಿಕಾ ಇಲಾಖೆಯ ಕಾರ್ಯಕ್ರಮ ಮುಗಿಸಿ ಮಂಗಳೂರು ಕಡೆಗೆ ಹೋಗುತ್ತಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರನ್ನು, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಸ್ಥಳೀಯರು ಕೃತಕ ಕೆರೆ ಸೃಷ್ಟಿಯಾಗಿರುವ ಸ್ಥಳದಲ್ಲಿ ತಡೆದು ನಿಲ್ಲಿಸಿದರು.

ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆರಂಭದ ದಿನದಿಂದಲೂ ಇಲ್ಲಿ ಈ ಸಮಸ್ಯೆ ತಲೆದೋರಿದ್ದು, ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಳ್ಳ ಬೇಕು ಎಂದು ಸ್ಥಳೀಯರು ಸಚಿವರನ್ನು ಆಗ್ರಹಿಸಿದರು. ಈ ವೇಳೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸದ ಕಾರಣ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸಚಿವರ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಸಚಿವರು, ಇಲ್ಲಿನ ಸಮಸ್ಯೆ ಪರಿಹರಿಸುವಂತೆ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದರು.

ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಕಿಶೋರ್ ಕುಮಾರ್ ಕುಂದಾಪುರ, ರಾಜೇಶ್ ಕಾವೇರಿ, ಶಿರಿಯಾರ ಗೋಪಾಲ ಕೃಷ್ಣ ಶೆಟ್ಟಿ, ಶಶಿಧರ ಹೆಮ್ಮಾಡಿ, ಗಣೇಶ್, ಸ್ಥಳೀಯ ಆಟೋ ಚಾಲಕರು, ಅಂಗಡಿ ಮಾಲಕರು ಸೇರಿಂತೆ ಮೊದಲಾದವರು ಹಾಜರಿದ್ದರು.

''ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ಹರಿದು ಹೋಗದೆ ಸಮಸ್ಯೆ ಆಗುತ್ತಿರುವ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ. ಜಿಲ್ಲಾಧಿಕಾರಿ ಗಳಿಗೆ ತಕ್ಷಣವೇ ಇಲ್ಲಿನ ನೀರು ಸರಿಯಾಗಿ ಹರಿದುಹೋಗುವಂತೆ ಮಾಡುವ ಮೂಲಕ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯವೊಂದಿಗೂ ಕೂಡ ಮಾತನಾಡುತ್ತೇನೆ.''

-ಕೋಟ ಶ್ರೀನಿವಾಸ ಪೂಜಾರಿ, ಸಚಿವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News