​ಆ. 9: ದ.ಕ. ಜಿಲ್ಲೆಯಾದ್ಯಂತ ‘ರೆಡ್ ಅಲರ್ಟ್’ ಘೋಷಣೆ

Update: 2020-08-08 14:10 GMT

ಮಂಗಳೂರು, ಆ.8: ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆ ಬೀಳುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆಯು ದ.ಕ. ಜಿಲ್ಲೆಯಾದ್ಯಂತ ಆ. 9ರಂದು ‘ರೆಡ್ ಅಲರ್ಟ್’ ಘೋಷಿಸಿದೆ.

ಜಿಲ್ಲೆಯಲ್ಲಿ ವಾರದಿಂದ ವ್ಯಾಪಕ ಮಳೆ ಸುರಿಯುತ್ತಿದ್ದು, ಇನ್ನು ಹಲವು ದಿನಗಳವರೆಗೆ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಆ.9ರಂದು ‘ರೆಡ್ ಅಲರ್ಟ್’ ಘೋಷಿಸಿದ ದಿನ ಸುಮಾರು 204.4 ಮಿ.ಮೀ.ವರೆಗೆ ಮಳೆ ಬೀಳಲಿದೆ. ಆ.10, 11ರಂದು ‘ಆರೆಂಜ್ ಅಲರ್ಟ್’ ಮುಂದುವರಿಯಲಿದೆ.

ಸಾರ್ವಜನಿಕರು ನದಿ/ಸಮುದ್ರಕ್ಕೆ ಇಳಿಯದಂತೆ ಎಚ್ಚರದಿಂದ ಇರಬೇಕು. ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ/ ಕಟ್ಟಡ/ ಮರಗಳ ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಳನ್ನು ತಲುಪಬೇಕು. ಎಲ್ಲ ಜಿಲ್ಲಾ/ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿರಬೇಕು.

ಎಲ್ಲ ಗ್ರಾಪಂ ಪಿಡಿಒಗಳು ಹಾಗೂ ಗ್ರಾಮ ಕರಣಿಕರು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಸನ್ನದ್ಧರಾಗಿದ್ದು, ಯಾವುದೇ ವಿಪತ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವುದು ಹಾಗೂ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

1077 ಕರೆ ಮಾಡಿ
ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಗೆ ಜಿಲ್ಲಾಡಳಿತದ ಟೋಲ್ ಫ್ರೀ ನಂ.1077 ಅಥವಾ 9483908000 (ವಾಟ್ಸ್‌ಆ್ಯಪ್)ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ದ.ಕ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News