ಕರಾವಳಿಯ ಜಾದೂಗಾರ ಮಾಸ್ಟರ್ ಚಿಂತನ್ ನಿಧನ

Update: 2020-08-08 14:45 GMT

ಮಂಗಳೂರು, ಆ.8: ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಪ್ರತಿಭಾನ್ವಿತ ಜಾದೂ ಕಲಾವಿದ ಮಾಸ್ಟರ್ ಚಿಂತನ್ (36) ಕಾಸರಗೋಡು ತಾಲೂಕಿನ ಮದ್ದೂರಿನ ಸ್ವಗೃಹದಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು.

ಮಾಸ್ಟರ್ ಚಿಂತನ್ ತನ್ನ 11ನೇ ವಯಸ್ಸಿಗೆ ತಂದೆಯಾದ ಕಾಸರಗೋಡಿನ ಹಿರಿಯ ಜಾದೂಗಾರ ನಾರ್ತ್ ಮಲಬಾರ್ ಮ್ಯಾಜಿಕ್ ಫೌಂಡೇಶನ್ ಅಧ್ಯಕ್ಷ ಪ್ರೊ.ಮಾಧವ್ ಅವರಿಂದ ಜಾದೂ ಕಲಿಕೆ ಆರಂಭಿಸಿದ್ದರು. ಜಾದೂಗಾರ ಕುದ್ರೋಳಿ ಗಣೇಶ್ ಅವರ ಶಿಷ್ಯರಾಗಿದ್ದರು. ಅಪಾರ ಕೈಚಳಕದ ಅಗತ್ಯವಿರುವ ಮ್ಯಾಜಿಪ್ಯುಲೇಶನ್ ಜಾದೂ ವಿಭಾಗದಲ್ಲಿ ಪರಿಣಿತ ಹೊಂದಿದ್ದ ಮಾಸ್ಟರ್ ಚಿಂತನ್ 1994ರಲ್ಲಿ ಕೇರಳದ ಪ್ರತಿಷ್ಠಿತ ವಾಳಕ್ಕುನಂ ಪ್ರಶಸ್ತಿ ಗೆದ್ದ ಮೊದಲ ಕನ್ನಡಿಗರಾಗಿದ್ದರು.

1997ರಲ್ಲಿ ಉಡುಪಿಯ ಗಿಲಿಗಿಲಿ ಜಾದೂ ಸಮ್ಮೇಳನ, 1998ರಲ್ಲಿ ತಿರುವನಂತಪುರದ ವಿಸ್ಮಯಮ್ ಜಾದೂ ಸಮ್ಮೇಳನದ ಜೂನಿಯರ್ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರಿಯ ಜಾದೂ ಸಮ್ಮೇಳನದಲ್ಲಿ ಅತ್ಯುನ್ನತ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು. ದಕ್ಷಿಣ ಭಾರತದ ವಿವಿಧೆಡೆ ನೂರಾರು ಪ್ರದರ್ಶನ ನೀಡಿದ್ದರು.

ಮಾಸ್ಟರ್ ಚಿಂತನ್ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ಹಾಗೂ ಕಾಸರಗೋಡು ಅಗಲ್ಪಾಡಿಯ ಅನ್ನಪೂರ್ಣೇಶ್ವರಿ ಹೈಸ್ಕೂಲಿನ ಹಳೆ ವಿದ್ಯಾರ್ಥಿಯಾಗಿದ್ದರು.

ಸಂತಾಪ: ಜಾದೂಗಾರ ಚಿಂತನ್ ನಿಧನಕ್ಕೆ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್, ಮಂಗಳಾ ಮ್ಯಾಜಿಕ್ ಸರ್ಕಲ್ ಅಧ್ಯಕ್ಷ ಸ್ವರ್ಣ ಸುಂದರ್, ದಿಲ್ಲಿಯ ಮಾಜ್ ಮಾ ಸಂಸ್ಥೆಯ ಅಧ್ಯಕ್ಷ ರಾಜ್‌ಕುಮರ್, ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ, ಜಾದೂ ಸಂಸ್ಥೆಗಳು, ಜಾದೂ ಕಲಾವಿದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News