ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ : ತುಂಬಿ ಹರಿಯುತ್ತಿರುವ ನದಿಗಳು; ತಗ್ಗುಪ್ರದೇಶಗಳು ಜಲಾವೃತ

Update: 2020-08-08 15:22 GMT

 ಉಡುಪಿ, ಆ.8: ಜಿಲ್ಲೆಯಲ್ಲಿ ದಿನವಿಡೀ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಭಾರೀ ಮಳೆಯಾ ಗುತ್ತಿ ರುವುದರಿಂದ ಎಲ್ಲಾ ನದಿಗಳು ತುಂಬಿ ಹರಿಯುತಿದ್ದು, ಜಿಲ್ಲೆಯ ಹೆಚ್ಚಿನೆಲ್ಲಾ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಆದರೆ ಜಿಲ್ಲೆಯ ಎಲ್ಲಿಂದಲೂ ಜನರಿಗೆ ಹಾಗೂ ಮನೆಗಳಿಗೆ ಇದರಿಂದ ಸಮಸ್ಯೆಯಾದ ವರದಿಗಳು ಬಂದಿಲ್ಲ.

ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಬಿರುಸಿನ ಮಳೆಯಿಂದ ಅಲ್ಲೇ ಹುಟ್ಟಿ ಪಶ್ಚಿಮಕ್ಕೆ ಹರಿದು ಅರಬಿಸಮುದ್ರ ಸೇರುವ ಜಿಲ್ಲೆಯ ಎಲ್ಲಾ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕುಗಳ ತಗ್ಗುಪ್ರದೇಶಗಳ ತುಂಬೆಲ್ಲಾ ನೀರು ನಿಂತಿದೆ. ಕೆಲವು ಕಡೆಗಳಲ್ಲಿ ಸಂಪರ್ಕ ರಸ್ತೆಗಳು ಜಲಾವೃತ ಗೊಂಡಿರುವುದರಿಂದ ಜನರು ಸಂಚಾರಕ್ಕೆ ದೋಣಿಗಳನ್ನು ಬಳಸುತಿದ್ದಾರೆ.

ಆ.10ರ ಮುಂಜಾನೆಯವರೆಗೆ ಕರಾವಳಿಯುದ್ದಕ್ಕೂ ಭಾರೀ ಮಳೆ ಮುಂದುವರಿಯುವ ಕಾರಣ ರೆಡ್‌ಅಲರ್ಟ್ ಘೋಷಣೆಯಾಗಿದ್ದು, ನೆರೆ ಪರಿಸ್ಥಿತಿ ನಾಳೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 123ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 94.6ಮಿ.ಮೀ., ಕುಂದಾಪುರ 128ಮಿ.ಮೀ. ಹಾಗೂ ಕಾರ್ಕಳ 136 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

ಬೈಂದೂರು ತಾಲೂಕಿನಲ್ಲಿ ನಾವುಂದ ಹಾಗೂ ಇತರ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದರೂ, ಮನೆಗಳಿಗೆ ಹಾಗೂ ಜನರಿಗೆ ಇದರಿಂದ ತೊಂದರೆ ಯಾಗಿಲ್ಲ. ಜನರು ಅಲ್ಲಲ್ಲಿ ಸಂಚರಾಕ್ಕೆ ದೋಣಿ ಬಳಸುತಿದ್ದಾರೆ ಎಂದು ತಹಶೀಲ್ದಾರ್ ಬಸಪ್ಪ ಪೂಜಾರ್ ತಿಳಿಸಿದರು.

ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಹೆರೈಬೆಟ್ಟು, ಕುದ್ರುಬೆಟ್ಟು ನೆರೆ ಬರುವ ಪ್ರದೇಶಗಳಾಗಿದ್ದು, ಅಲ್ಲಿ ತಗ್ಗುಪ್ರದೇಶ ಹಾಗೂ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಮನೆಗಳಿಗೆ ಸಮಸ್ಯೆಯಾಗಿಲ್ಲ, ಆದರೂ ದೋಣಿಯ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.

ಆರೂರು ಗ್ರಾಮದ ಬೆಳ್ಮಾರು ಎಂಬಲ್ಲಿ ಮಡಿಸಾಲು ಹೊಳೆ ತುಂಬಿ ಹರಿಯುತ್ತಿದೆ. ಇಲ್ಲಿ ಗದ್ದೆ ಸೇರಿದಂತೆ ತಗ್ಗುಪ್ರದೇಶ ನೀರಿನಿಂದ ತುಂಬಿದೆ. ಇಲ್ಲಿ ಆರು ಮನೆಗಳಿದ್ದು, 200ಮೀ.ದೂರದಲ್ಲಿ ರಸ್ತೆ ಸಂಪರ್ಕ ಇರುವುದರಿಂದ ಸಮಸ್ಯೆ ಇಲ್ಲ. ಇವರಿಗೂ ತುರ್ತು ಅಗತ್ಯಕ್ಕೆ ದೋಣಿ ವ್ಯವಸ್ಥೆ ಮಾಡಲಾಗಿದೆ ಎಂದವರು ಹೇಳಿದರು.

ನೀಲಾವರ ಗ್ರಾಮದಲ್ಲಿ ಸೀತಾನದಿ ಸುತ್ತುವರಿದಿರುವ ಬಾವಲಿಕುದ್ರು ದ್ವೀಪ ಪ್ರದೇಶಕ್ಕೆ ತಾನು ಭೇಟಿ ನೀಡಿ ಪರಿಶೀಲಿಸಿರುವುದಾಗಿ ಹೇಳಿದ ಕಿರಣ್ ಗೋರಯ್ಯ, ಇಲ್ಲಿರುವ ಆರು ಮನೆಗಳಿಗೂ ದೋಣಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ನೆರೆ ಬರುವ ಪ್ರದೇಶಗಳಾದ ನಂದನಕುದ್ರು, ಸಾಹೇಬರಕುದ್ರು ಹಾಗೂ ರಾಮನಕುದ್ರು ಪ್ರದೇಶಗಳಿಗೂ ತಾನು ಭೇಟಿ ನೀಡಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಇಲ್ಲೂ ದೋಣಿ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.

ದೂರುಗಳು ಬಂದ ಬೈಕಾಡಿ ಹಾಗೂ ಹೇರೂರು ಗ್ರಾಮಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕೋಟ ಹೋಬಳಿಯ ಕೋಡಿ ಮತ್ತು ಮಊರು ಕಡಲ ಕೊರೆತ ಪ್ರದೇಶವನ್ನು ಪರಿಶೀಲಿಸಿದ್ದು, ಸದ್ಯ ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು. ಅದೇ ರೀತಿ ಸಾಮಾನ್ಯವಾಗಿ ನೆರೆ ಬರುವ ಶಿರಿಯಾದ, ಬಾರಕೂರು, ಹಂದಾಡಿ ಗ್ರಾಮಗಳ ತಗ್ಗುಪ್ರದೇಶಗಳಲ್ಲಿ ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದವರು ಹೇಳಿದರು.

ಗಾಳಿ-ಮಳೆಗೆ ಲಕ್ಷಾಂತರ ರೂ.ನಷ್ಟ: ಕಳೆದೆರಡು ದಿನಗಳಿಂದ ಬೀಸುತ್ತಿರುವ ಗಾಳಿ-ಮಳೆಗೆ ಜಿಲ್ಲೆಯಲ್ಲಿ ನೂರಾರು ಮನೆ, ಕಟ್ಟಡಗಳಿಗೆ ಹಾನಿಯಾಗಿವೆ. ಸಾವಿರಾರು ಮರಗಳು ಧರಾಶಾಹಿಯಾಗಿವೆ. ಇದರಿಂದ ಸಂಚಾರ ಅಸ್ತವ್ಯಸ್ಥ ಗೊಂಡಿದ್ದು, ಮೆಸ್ಕಾಂ ಇಲಾಖೆಗೂ ಇದರಿಂದ ನಷ್ಟವಾಗಿದೆ. ಬಹಳಷ್ಟು ಕೃಷಿ ಬೆಳೆ, ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಇವುಗಳಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ವರದಿ ಬಂದಿದೆ.

ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಲಕ್ಷ್ಮಣ ದೇವಾಡಿಗ ಎಂಬವರ ಮನೆ ಗಾಳಿ-ಮಳೆಯಿಂದ ಸಂಪೂರ್ಣ ನಾಶವಾಗಿದ್ದು ಐದು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಉಳಿದಂತೆ ಬೈಂದೂರು ತಾಲೂಕಿನ ಮೂರು, ಬ್ರಹ್ಮಾವರ ತಾಲೂಕಿನ ಆರು ಹಾಗೂ ಕಾಪು ತಾಲೂಕಿನ ಒಂದು ಪ್ರಕರಣಗಳಿಂದ ಒಟ್ಟು ಸುಮಾರು ನಾಲ್ಕು ಲಕ್ಷ ರೂ. ನಷ್ಟ ಸಂಭವಿಸಿದೆ.

ಅಡಿಕೆ ತೋಟಗಳಿಗೆ ಹಾನಿ: ಬಿರುಗಾಳಿಗೆ ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮದ ಗಣಪಯ್ಯ ಶೆಟ್ಟಿ ಅವರ ತೋಟದ 200 ಅಡಿಕೆ ಮರಗಳು ನೆಲಕ್ಕುರುಳಿದ್ದು ಒಂದೂವರೆ ಲಕ್ಶ ರೂ. ನಷ್ಟದ ಅಂದಾಜು ಮಾಡಲಾಗಿದೆ. ಅದೇ ಗ್ರಾಮದ ಕೊರಗಯ್ಯ ಶೆಟ್ಟಿ, ವಿಠಲ ಶೆಟ್ಟಿ, ಮಂಜ ಪೂಜಾರಿ ಹಾಗೂ ಕೊಲ್ಲೂರು ಗ್ರಾಮದ ಪ್ರದೀಪ ಭಟ್ಟರ ಅಡಿಕೆ ತೋಟಕ್ಕೂ ಹಾನಿಯಾಗಿದ್ದು ಎರಡು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.

ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಅಂಗನವಾಡಿ ಮತ್ತು ಗ್ರಾಮಕರಣಿಕರ ಕಚೇರಿಗಳಿಗೆ ಭಾಗಶ:ಹಾನಿಯಾಗಿದ್ದು ಒಂದೂವರೆ ಲಕ್ಷ ರೂ.ನಷ್ಟವಾಗಿದೆ. ಕೊಲ್ಲೂರು ಗ್ರಾಮದ ಅಂಬಿಕಾ ದೇವಾಡಿಗರ ಮನೆ ಮೇಲೆ ತೆಂಗಿನಮರ ಬಿದ್ದು ಒಂದು ಲಕ್ಷ ರೂ., ಬೈಂದೂರು ತಾಲೂಕಿನ ವಿವಿದೆಡಗಳ 9 ಮನೆಗಳಿಗೆ ಸುಮಾರು 9 ಲಕ್ಷ ರೂ.ನಷ್ಟವಾಗಿದೆ.

ಎಣ್ಣೆಹೊಳೆಯಲ್ಲಿ ಪ್ರವಾಹದ ಎಚ್ಚರಿಕೆ: ಕಾರ್ಕಳ ತಾಲೂಕಿನ ಪಶ್ಚಿಮ ಘಟ್ಟ ತಪ್ಪಲಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಎಣ್ಣೆಹೊಳೆಯ ಸ್ವರ್ಣ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ತೀವ್ರ ಪ್ರವಾಹದ ಮುನ್ಸೂಚನೆ ಬಂದಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಬೇಕೆಂದು ಹೊಸದಿಲ್ಲಿಯ ಭಾರತದ ಕೇಂದ್ರ ಜಲ ಆಯೋಗ ಪ್ರವಾಹ ಮುನ್ಸೂಚನೆ ಮಾನಿಟರಿಂಗ್ ನಿರ್ದೇಶನಾಲಯ ಕೇಂದ್ರ ಪ್ರವಾಹ ನಿಯಂತ್ರಣ ಕೊಠಡಿಯಿಂದ ಮುನ್ಸೂಚನೆ ಬಂದಿದೆ.

ಆದುದರಿಂದ ಸ್ವರ್ಣ ನದಿಯ ಆಸುಪಾಸಿನ ಗ್ರಾಮಗಳಲ್ಲಿ ಎಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆಗಳನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News