ದ.ಕ.ಜಿಲ್ಲಾದ್ಯಂತ ಮಳೆಯ ಆರ್ಭಟ : ನದಿ ತೀರದ ಸುತ್ತಮುತ್ತಲಿನ ಮನೆಗೆ ನುಗ್ಗಿದ ನೀರು

Update: 2020-08-08 17:13 GMT

ಮಂಗಳೂರು, ಆ.8: ಕಳೆದೊಂದು ವಾರದಿಂದ ಅವಿಭಜಿತ ದ.ಕ. ಜಿಲ್ಲಾದ್ಯಂತ ಸುರಿಯುತ್ತಿದ್ದ ಮಳೆಯು ಶನಿವಾರ ತನ್ನ ಆರ್ಭಟ ಹೆಚ್ಚಿಸಿದ್ದು, ಅಕ್ಷರಶಃ ಜಿಲ್ಲೆ ನಲುಗಿದೆ.

ಮುಂಜಾನೆಯಿಂದಲೇ ಭಾರೀ ಗಾಳಿಯೊಂದಿಗೆ ಸುರಿಯತೊಡಗಿದ ಮಳೆಯಿಂದಾಗಿ ಜಿಲ್ಲೆಯ ನೇತ್ರಾವತಿ, ಕುಮಾರಧಾರ, ಪಲ್ಗುಣಿ ನದಿಗಳಲ್ಲಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಆಸುಪಾಸಿನ ಹಲವು ಮನೆಗಳಿಗೆ ನೀರು ನುಗ್ಗಿದೆ. ನೆರೆ ಹಾವಳಿಯ ಭೀತಿಗೊಳಗಾದ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಈ ಮಧ್ಯೆ ಹಲವು ಮಂದಿಗೆ ಶಾಲೆಗಳಲ್ಲಿ ತೆರೆಯಲಾದ ಕಾಳಜಿ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಶನಿವಾರ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣದೊಂದಿಗೆ ನಿರಂತರವಾಗಿ ಮಳೆ ಸುರಿದಿದೆ. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಮಂಗಳೂರು ನಗರ ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ಒಳಚರಂಡಿಯ ಅವ್ಯವಸ್ಥೆಯಿಂದಾಗಿ ಮಳೆನೀರು ರಸ್ತೆಯಲ್ಲೇ ರಭಸದಿಂದ ಹರಿಯುತ್ತಿದ್ದುದು ಕಂಡು ಬಂತು. ನೀರಿನ ರಭಸದ ಹರಿವಿನಿಂದ ವಾಹನಗಳ ಓಡಾಟಕ್ಕೂ ಅಡಚಣೆ ಉಂಟಾಯಿತು.

ಘಟ್ಟ ಪ್ರದೇಶಗಳಲ್ಲೂ ನಿರಂತರ ಮಳೆ ಸುರಿದ ಪರಿಣಾಮ ಕರಾವಳಿ ತೀರದ ನದಿತೀರದ ಹಲವು ತಗ್ಗು ಪ್ರದೇಶಗಳಿಗೆ, ಮನೆ, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಉಳ್ಳಾಲ, ಸೋಮೇಶ್ವರ-ಉಚ್ಚಿಲ, ಪಣಂಬೂರು, ಬೈಕಂಪಾಡಿ ಸಹಿತ ಕಡಲ ತೀರದ ಹಲವು ಕಡೆ ಸಮುದ್ರದ ಅಲೆಗಳು ರೌದ್ರಾವತಾರ ತಾಳುತ್ತಿದೆ. ಕಡಲ ತೀರದ ಮನೆಗಳ ಗೋಡೆಗೆ ಅಪ್ಪಳಿಸುತ್ತಿದೆ. ಇದರಿಂದ ಹಲವು ಮನೆಗಳಿಗೆ ಹಾನಿಯಾಗಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದ ಸಹಿತ ಹಲವು ಕಡೆ ವಿದ್ಯುತ್ ಕಂಬಗಳು, ಮರಗಳು ನೆಲಸಮವಾಗಿದೆ. ಇದಿರಂದ ವಿದ್ಯುತ್ ಕಣ್ಣುಮುಚ್ಚಾಲೆಯಾಟವಾಡುತ್ತಿತ್ತು, ಕೆಲವು ಕಡೆ ರಸ್ತೆಗೆ ಅಡ್ಡವಾಗಿ ಮರಗಳು ಉರುಳಿ ಬಿದ್ದು ವಾಹನಗಳ ಓಡಾಟಕ್ಕೂ ಕೆಲಕಾಲ ಅಡಚಣೆ ಉಂಟಾಗಿತ್ತು.

ನಗರದ ಜಪ್ಪಿನಮೊಗರು ಮತ್ತು ಅತ್ತಾವರದಲ್ಲಿ ಸುಮಾರು 15 ಕುಟುಂಬಗಳನ್ನು ಸ್ಥಳೀಯ ಆರ್ಯ ಮರಾಠ ಸಂಘದ ಕಟ್ಟಡಕ್ಕೆ ಸ್ಥಳಾಂತರಿಸ ಲಾಗಿದೆ. ಕಲ್ಲಾಪು ಬಳಿಯೂ ನೀರಿನ ಮಟ್ಟ ಅಪಾಯದಲ್ಲಿದ್ದು, ಪರಿಸರದ ನಿವಾಸಿಗಳು ಮನೆ ತೆರವು ಮಾಡಲು ಸೂಚಿಸಲಾಗಿದೆ. ಸೋಮೇಶ್ವರದಲ್ಲೂ 1 ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ನಡೆಸಲಾಗಿದೆ. ತಾಲೂಕಿನಲ್ಲಿ ಸದ್ಯ 6 ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.

ಹಟ್ಟಿಗೆ ನುಗ್ಗಿದ ನೀರು : ಬಜ್ಪೆ ಸಮೀಪದ ಆದ್ಯಪಾಡಿ ಮತ್ತು ಕೊಳಂಬೆಯ ಎರಡು ಹಟ್ಟಿಗೆ ನೀರು ನುಗ್ಗಿದೆ. ತಕ್ಷಣ ಹಟ್ಟಿಯಲ್ಲಿದ್ದ 16 ಜಾನುವಾರು ಗಳನ್ನು ಸ್ಥಳಾಂತರಿಸಲಾಗಿದೆ.

ಕೂಳೂರು ಶಾಲೆಯಲ್ಲಿ ವ್ಯವಸ್ಥೆ : ಎಂಆರ್‌ಪಿಎಲ್ ಕಂಪೆನಿಯು ತಣ್ಣೀರುಬಾವಿಯಲ್ಲಿ ನಿರ್ಮಿಸುತ್ತಿರುವ ಸಿಹಿ ನೀರಿನ ಘಟಕಕ್ಕೆ ಸಮುದ್ರ ನೀರು ನುಗ್ಗಿದ ಹಿನ್ನೆಲೆಯಲ್ಲಿ ಅಪಾಯದ ಭೀತಿ ಎದುರಿಸುತ್ತಿದ್ದ ಆಸುಪಾಸಿನ 15ಕ್ಕೂ ಅಧಿಕ ಮನೆಗಳ ಜನರನ್ನು ಮುಂಜಾಗರೂಕತಾ ಕ್ರಮವಾಗಿ ಕೂಳೂರಿನ ಶಾಲೆಗೆ ಸ್ಥಳಾಂತರಿ ಸಲಾಗಿದೆ.

ಅಂಗರಗುಂಡಿಯಲ್ಲಿ ವ್ಯವಸ್ಥೆ : ಕೂಳೂರು ಸಮೀಪದ ನದಿ ತಟದಲ್ಲಿ ತೆಪ್ಪದಲ್ಲಿ ಮೀನು ಹಿಡಿದು ದಿನದೂಡುತ್ತಿದ್ದ ಮಕ್ಕಳು, ಗರ್ಭಿಣಿಯರ ಸಹಿತ 15 ಮಂದಿಗೆ ಬೈಕಂಪಾಡಿಯ ಅಂಗರಗುಂಡಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಗುರುಪುರದಲ್ಲಿ ಮನೆಗೆ ಹಾನಿ : ಗುರುಪುರ ಕೊಟ್ಟಾರಿಗುಡ್ಡೆಯ ಬಾಬು ದೇವಾಡಿಗರ ಮನೆಗೆ ತೆಂಗಿನ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಜಿಎಂ ಉದಯ್ ಭಟ್ ಸ್ಥಳಕ್ಕೆ ಭೇಟಿ ನೀಡಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಪರಿಹಾರ ಕುರಿತು ಮಾತುಕತೆ ನಡೆಸಿದರು.

ಗಂಜಿ ಕೇಂದ್ರವಲ್ಲ...ಕಾಳಜಿ ಕೇಂದ್ರ : ಅಂದಹಾಗೆ, ಮಳೆಗಾಲದಲ್ಲಿ ಸಂತ್ರಸ್ತರಿಗೆ ತಕ್ಷಣಕ್ಕೆ ಪರಿಹಾರ ಕಲ್ಪಿಸಲಾವ ಕೇಂದ್ರಕ್ಕೆ ‘ಗಂಜಿ ಕೇಂದ್ರ’ ಎಂದು ಕರೆಯುವುದು ಸಾಮಾನ್ಯವಾಗಿದೆ. ಈ ಬಗ್ಗೆ ಸಾಕಷ್ಟು ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಅದನ್ನು ‘ಕಾಳಜಿ ಕೇಂದ್ರ’ ಎಂದು ಕರೆಯಲಾಗುತ್ತದೆ.

ಸ್ವಯಂ ಸೇವಕರ ತಂಡ : ಶನಿವಾರ ನಿರಂತರವಾಗಿ ಸುರಿದ ಮಳೆಯಿಂದ ಅಪಾರ ಹಾನಿಯೊಂದಿಗೆ ಜನಜೀವನಕ್ಕೂ ತೊಂದರೆಯಾಗಿತ್ತು. ಜಿಲ್ಲಾಡಳಿತದ ಅಧೀನದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಮುಳುಗುತಜ್ಞರ ತಂಡವು ಅಲ್ಲಲ್ಲಿ ಕಾರ್ಯಾಚರಣೆಗೆ ಇಳಿದರೆ, ಜಿಲ್ಲೆಯ ನಾನಾ ಕಡೆ ವಿವಿಧ ಸಾಮಾಜಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಒಳಗೊಂಡಂತೆ ಸ್ವಯಂ ಸೇವಕರ ತಂಡವು ಅಪಾಯಕಾರಿ ಸ್ಥಳಗಳಲ್ಲಿ ನಿಂತು ಪ್ರಾಣದ ಹಂಗು ತೊರೆದು ಸಂಕಷ್ಟಕ್ಕೆ ಸಿಲುಕಿದ್ದ ಜನಸಾಮಾನ್ಯರನ್ನು ಸ್ಥಳಾಂತರಿಸಿ ಗಮನ ಸೆಳೆದರು. ರಕ್ಷಣಾ ಕಾರ್ಯಾಚರಣೆಯ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News