ಬಂಟ್ವಾಳ : ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ

Update: 2020-08-08 17:25 GMT

ಬಂಟ್ವಾಳ, ಆ.8: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಬಂಟ್ವಾಳ ತಾಲೂಕಿನ ಹಲವು ಪ್ರದೇಶಗಳು ಜಲಾವೃತಗೊಂಡಿದೆ.

ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು ಶನಿವಾರ ಬೆಳಗ್ಗೆ 7 ಗಂಟೆಯ ವೇಳೆಗೆ ನೇತ್ರಾವತಿ ನದಿಯಲ್ಲಿ 9 ಮೀಟರ್ ಮಟ್ಟದಲ್ಲಿ ನೀರು ಹರಿಯುತ್ತಿತ್ತು. ಪರಿಣಾಮ ಬಂಟ್ವಾಳ ಹಾಗೂ ಪಾಣೆಮಂಗಳೂರು ಹೋಬಳಿಯ ಹಲವು ಪ್ರದೇಶಗಳು ಜಲಾವೃತಗೊಂಡು ಮನೆ, ಅಂಗಡಿಗಳಿವೆ ನೀರು ನುಗ್ಗಿದೆ.

ಬೆಳಗ್ಗೆ 9 ಮೀಟರ್ ಇದ್ದ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಾ ಮಧ್ಯಾಹ್ನದ ವೇಳೆಗೆ 9.3 ಮೀಟರ್ ಗೆ ತಲುಪಿದೆ. ಮಧ್ಯಾಹ್ನದಿಂದ ಸಂಜೆಯವರೆಗೆ ಅದೇ ಮಟ್ಟದಲ್ಲಿ ನೀರು ಹರಿಯುತ್ತಿದೆ. ಗುರುವಾರ ಬೆಳಗ್ಗೆ ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 7.6 ಮೀಟರ್ ಆಗಿತ್ತು. ಶುಕ್ರವಾರ ಬೆಳಗ್ಗೆ 7.7 ಮೀಟರ್ ಇದ್ದರೆ ರಾತ್ರಿಯ ಬಳಿಕ ನದಿ ನೀರು ತೀವ್ರಗತಿಯಲ್ಲಿ ಏರಿದೆ‌.

ಶಂಭೂರು ಡ್ಯಾಂ ಈ ಮೊದಲೇ ಭರ್ತಿಯಾಗಿದ್ದು 14 ಗೇಟುಗಳನ್ನು ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. ತುಂಬೆ ಅಣೆಕಟ್ಟೆಯಲ್ಲಿ 7.8 ಮೀಟರ್ ಎತ್ತರಕ್ಕೆ ನೀರು ಹರಿಯುತ್ತಿದೆ. ಶುಕ್ರವಾರ ತುಂಬೆ ಡ್ಯಾಂನಲ್ಲಿ 6.4 ಮೀಟರ್ ಮಟ್ಟದಲ್ಲಿ ನೀರು ಹರಿಯುತ್ತಿತ್ತು. ಡ್ಯಾಂನ ಎಲ್ಲ 30 ಗೇಟುಗಳನ್ನು ತೆರೆಯಲಾಗಿದೆ.

ಬಂಟ್ವಾಳ ನೇತ್ರಾವತಿ ನದಿ ತೀರದ ಪ್ರದೇಶಗಳಾದ ಗೂಡಿನಬಳಿ, ಬಂಟ್ವಾಳ ರಸ್ತೆ, ಬಡ್ಡಕಟ್ಟೆ, ಅಜಿಲ ಮೊಗರು, ಆಲಡ್ಕ ಪಡ್ಪು, ಆಲಡ್ಕ, ಬೋಗೋಡಿ, ಸಹಿತ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಈ ಪ್ರದೇಶಗಳ ಹಲವು ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದೆ.‌ ಆಲಡ್ಕ ಕಿರು ಸೇತುವೆ, ಬಂಟ್ವಾಳ ಬಸ್ತಿಪಡ್ಪು ರಸ್ತೆ, ಗೂಡಿನಬಳಿ ಬಂಟ್ವಾಳ ರಸ್ತೆ ಸಹಿತ ಕೆಲವು ರಸ್ತೆಗಳು ಮುಳುಗಿದ್ದು ಸಂಚಾರ ನಿರ್ಬಂಧಿಸಲಾಗಿದೆ. 

ಈ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ ಹಲವು ಕುಟುಂಬಗಳನ್ನು ಮನೆ ಖಾಲಿ ಮಾಡಿಸಲಾಗಿದೆ. ಬಂಟ್ವಾಳ ತಾಲೂಕು ಆಡಳಿತದಿಂದ ಪರಿಹಾರ ಕೇಂದ್ರಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದರೂ ಯಾರೂ ಪರಿಹಾರ ಕೇಂದ್ರಕ್ಕೆ ಹೋಗದೆ ತಮ್ಮ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ‌. ತಾಲೂಕಿನಲ್ಲಿ ಯಾವುದೇ ಜಾನುವಾರು, ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಾಲೂಕು ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ತಾಲೂಕಿನ ಪಾಣೆಮಂಗಳೂರು, ನಂದಾವರ, ಬಂಟ್ವಾಳ ಕೆಳಗಿನ ಪೇಟೆ, ತಲಪಾಡಿ, ಪೊನ್ನೋಡಿ, ತುಂಬೆ, ವಳವೂರು, ಪುದು, ನಾವೂರು, ಅಜಿಲಮೊಗರು ಪ್ರದೇಶಗಳ ನದಿ ತೀರದ ಪ್ರದೇಶಗಳಿಗೆ ನೀರು ನುಗ್ಗಿದೆ. ಇತಿಹಾಸ ಪ್ರಸಿದ್ಧ ಅಜಿಲಮೊಗರು ಜುಮಾ ಮಸೀದಿ ಜಲಾವೃತಗೊಂಡಿದ್ದು ಮಸೀದಿಯ ಮುಂಭಾಗದಲ್ಲಿರುವ ಸಭಾ ಭವನಕ್ಕೆ ನೀರು ನುಗ್ಗಿದೆ. ಅಲ್ಲದೆ ಕೆಲವೆಡೆ ತೋಟ, ಗದ್ದೆಗೆ ನೀರು ನುಗ್ಗಿರುವು ದರಿಂದ ಕೃಷಿ ಹಾನಿಗೊಂಡಿದೆ ಎನ್ನಲಾಗಿದೆ‌.

ಗಾಳಿ ಮಳೆಗೆ ತಾಲೂಕಿನ ಹಲವೆಡೆ ವ್ಯಾಪಕ ಹಾನಿಗಳುಂಟಾಗಿವೆ. ಕುಕ್ಕಿಪ್ಪಾಡಿ ಗ್ರಾಮದ ಸಿದ್ಧಕಟ್ಟೆ ಚರ್ಚ್ ಅಂಗನವಾಡಿ ಕೇಂದ್ರದ ಆವರಣ ಗೋಡೆ ಕುಸಿದುಬಿದ್ದಿದೆ. ಮಳೆನೀರು ಅಂಗನವಾಡಿ ಕಟ್ಟಡದ ಒಳಗೆ ನುಗ್ಗಿ ಹಾನಿ ಸಂಭವಿಸಿದೆ. ಜೊತೆಗೆ ಹಂಚಿನ ಛಾವಣಿಗೂ ಹಾನಿ ಸಂಭವಿಸಿದೆ.

ಬಿ.ಸಿ.ರೋಡು- ಧರ್ಮಸ್ಥಳ ರಸ್ತೆಯ ಮಣಿಹಳ್ಳ ಸಮೀಪದ ಹಂಚಿಕಟ್ಟೆಯಲ್ಲಿ ಮರವೊಂದು ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕೆಲವು ಹೊತ್ತು ಸಂಚಾರ ಬಂದ್ ಆಗಿತ್ತು. ಬಳಿಕ ಸ್ಥಳೀಯರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಚಿತ್ರ: ಕಿಶೋರ್ ಪೇರಾಜೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News