ಆಂಧ್ರಪ್ರದೇಶ: ಕೋವಿಡ್ ಕೇಂದ್ರವಾಗಿದ್ದ ಹೋಟೆಲ್‌ನಲ್ಲಿ ಬೆಂಕಿ: 9 ಮಂದಿ ಮೃತ್ಯು

Update: 2020-08-09 05:32 GMT

ಹೈದರಾಬಾದ್, ಆ.9: ಆಂಧ್ರಪ್ರದೇಶದ ವಿಜಯವಾಡದಲ್ಲಿ ಕೋವಿಡ್ 19 ವ್ಯವಸ್ಥೆಗಾಗಿ ಬಳಸುತ್ತಿದ್ದ ಹೋಟೆಲ್‌ನಲ್ಲಿ ರವಿವಾರ ಬೆಳಗ್ಗಿನ ಜಾವ ಸಂಭವಿಸಿದ ಭಾರೀ ಬೆಂಕಿ ಅನಾಹುತದಲ್ಲಿ 9 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಘಟನೆಯ ವೇಳೆ 30 ಕೋವಿಡ್ ರೋಗಿಗಳು ಹೋಟೆಲ್‌ನಲ್ಲಿದ್ದರು.

ಘಟನೆಯು ಬೆಳಿಗ್ಗೆ 5ಗಂಟೆಗೆ ನಡೆದಿದ್ದು 30 ನಿಮಿಷದೊಳಗೆ ಬೆಂಕಿಯನ್ನು ತಹಬಂದಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಹೋಟೆಲ್‌ನಲ್ಲಿ ದಾಖಲಾಗಿದ್ದ ರೋಗಿಗಳು ಆತಂಕಕ್ಕೀಡಾಗಿದ್ದು ಇಬ್ಬರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೋಟೆಲ್‌ನಿಂದ ಈ ತನಕ 20 ಜನರನ್ನು ರಕ್ಷಿಸಲಾಗಿದೆ, ಇನ್ನಷ್ಟು ಜನರು ಹೋಟೆಲ್ ಕಟ್ಟಡದಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

 "ಬೆಳಗ್ಗೆ 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಸುಮಾರು 22 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ನಾವೀಗ ಇಡೀ ಕಟ್ಟಡವನ್ನು ತೆರವುಗೊಳಿಸಿದ್ದೇವೆ. ಬೆಂಕಿ ಹೊತ್ತಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಆದರೆ,ನಾವು ಕಾರಣವನ್ನು ಖಚಿತಪಡಿಸಿಕೊಳ್ಳುತ್ತೇವೆ'' ಎಂದು ಕೃಷ್ಣ ಜಿಲ್ಲಾ ಕಲೆಕ್ಟರ್ ಮುಹಮ್ಮದ್ ಇಮ್ತಿಯಾಝ್ ಹೇಳಿದ್ದಾರೆ.

ಹೊಟೇಲ್ ಸ್ವರ್ಣ ಪ್ಯಾಲೇಸ್‌ನ್ನು ರಮೇಶ್ ಹಾಸ್ಪೆಟಲ್‌ನವರು ಕೋವಿಡ್ ರೋಗಿಗಳಿಗಾಗಿ ಲೀಸ್ ಪಡೆದಿದ್ದರು. ಘಟನೆಯಿಂದಾಗಿ ಕೆಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹಿರಿಯಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಖ್ಯಮಂತ್ರಿ ವೈ ಎಸ್ ಜಗಮೋಹನ್ ರೆಡ್ಡಿ ಆಘಾತ ವ್ಯಕ್ತಪಡಿಸಿದರು. ಘಟನೆಯ ಕುರಿತು ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಮೃತಪಟ್ಟವರಿಗೆ ಶೋಕ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಜಗನ್‌ಗೆ ಸಾಧ್ಯವಾದಷ್ಟು ನೆರವು ನೀಡುವ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News