8 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗೆ 17,100 ಕೋ.ರೂ. ವರ್ಗಾಯಿಸಿದ ಪ್ರಧಾನಿ ಮೋದಿ

Update: 2020-08-09 16:47 GMT

ಹೊಸದಿಲ್ಲಿ,ಆ.9: ಕೃಷಿಕರಿಗೆ ವಾರ್ಷಿಕ 6,000 ರೂ.ಗಳ ಸಹಾಯಧನವನ್ನು ನೇರವಾಗಿ ಒದಗಿಸುವ ಗುರಿ ಹೊಂದಿರುವ ಪಿಎಂ-ಕಿಸಾನ್ ಯೋಜನೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ 17,100 ಕೋ.ರೂ.ಗಳನ್ನು ವಿದ್ಯುನ್ಮಾನ ವಿಧಾನದ ಮೂಲಕ ಎಂಟೂವರೆ ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ರವಾನಿಸಿದರು.

2018ರಲ್ಲಿ ಜಾರಿಗೆ ಬಂದಿರುವ ಯೋಜನೆಯ ಆರನೇ ಕಂತಿನ ಅಂಗವಾಗಿ ಈ ಮೊತ್ತವನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಯೋಜನೆಯಡಿ ಈವರೆಗೆ 10 ಕೋ.ಗೂ ಅಧಿಕ ರೈತರಿಗೆ 90,000 ಕೋ.ರೂ.ಗಳಿಗೂ ಹೆಚ್ಚಿನ ನೇರ ನಗದು ಲಾಭವನ್ನೊದಗಿಸಲಾಗಿದೆ ಎಂದು ಸರಕಾರವು ತಿಳಿಸಿದೆ.

‘ಪಿಎಂ-ಕಿಸಾನ್ ಸಮ್ಮಾನ್ ನಿಧಿಯ 17,000 ಕೋ.ರೂ.ಗಳನ್ನು ಒಂದು ಕ್ಲಿಕ್ ಮೂಲಕ 8.5 ಕೋ.ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಯಾವುದೇ ಮಧ್ಯವರ್ತಿ ಅಥವಾ ಕಮಿಷನ್ ಇಲ್ಲದೆ ಈ ಹಣವು ನೇರವಾಗಿ ರೈತರಿಗೆ ಸೇರಿದೆ. ಯೋಜನೆಯ ಗುರಿ ಈಡೇರುತ್ತಿರುವುದು ತನಗೆ ತೃಪ್ತಿಯನ್ನುಂಟು ಮಾಡಿದೆ’ ಎಂದು ಮೋದಿ ಹೇಳಿದರು.

ದೇಶಾದ್ಯಂತದ ಲಕ್ಷಾಂತರ ರೈತರು, ಸಹಕಾರಿಗಳು ಮತ್ತು ನಾಗರಿಕರು ಪಾಲ್ಗೊಂಡಿದ್ದ ವೀಡಿಯೊ ಕಾನ್ಫರೆನ್ಸ್ ಮೂಲಕ ಒಂದು ಲಕ್ಷ ಕೋಟಿ ರೂ. ಬಂಡವಳದೊಂದಿಗೆ ರೂಪಿಸಲಾಗಿರುವ ಕೃಷಿ ಮೂಲಸೌಕರ್ಯ ಯೋಜನೆಗೆ ಮೋದಿ ಚಾಲನೆ ನೀಡಿದರು. ಈ ನಿಧಿಯು ರೈತರ ಬೆಲೆಗಳ ಕೊಯ್ಲಿನ ನಂತರ ಮೂಲಸೌಕರ್ಯ ನಿರ್ವಹಣೆ ಮತ್ತು ಶೀತಲೀಕೃತ ದಾಸ್ತಾನು ಕೇಂದ್ರ, ಸಂಗ್ರಹಣಾ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕಗಳಂತಹ ಸಮುದಾಯ ಕೃಷಿ ಆಸ್ತಿಗಳ ಸೃಷ್ಟಿಯನ್ನು ತ್ವರಿತಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಸೌಲಭ್ಯಗಳಿಂದಾಗಿ ರೈತರಿಗೆ ತಮ್ಮ ಉತ್ಪನ್ನಗಳನ್ನು ದಾಸ್ತಾನಿರಿಸಿ ಸೂಕ್ತ ಬೆಲೆಗಳಿಗೆ ಮಾರಾಟ ಮಾಡಲು,ಬೆಳೆ ಪೋಲಾಗುವುದನ್ನು ತಗ್ಗಿಸಲು, ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ನೆರವಾಗುವುದರಿಂದ ಅವರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಕೃಷಿ ಮೂಲಸೌಕರ್ಯ ನಿಧಿಯಡಿ 2,280ಕ್ಕೂ ಅಧಿಕ ರೈತ ಸಹಕಾರಿ ಸಂಘಗಳಿಗೆ 1,000 ಕೋ.ರೂ.ಹೆಚ್ಚಿನ ಮೊತ್ತವನ್ನು ಆರಂಭದ ದಿನವೇ ಮಂಜೂರು ಮಾಡಲಾಗಿದೆ ಎಂದು ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ಪಿಎಂ-ಕಿಸಾನ್ ಯೋಜನೆಯಡಿ ದೇಶದ ಪ್ರತಿಯೊಬ್ಬ ರೈತನಿಗೂ ಕನಿಷ್ಠ ಆದಾಯ ಬೆಂಬಲವಾಗಿ ವಾರ್ಷಿಕ 6,000 ರೂ.ಗಳ ಸಹಾಯಧನವನ್ನು ಅವರ ಆಧಾರ ದೃಢೀಕೃತ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ರೈತರ ನೆರವಿಗಾಗಿ ಸುಮಾರು 22,000 ಕೋ.ರೂ.ಗಳನ್ನು ಬಿಡುಗಡೆಗೊಳಿಸುವಲ್ಲಿಯೂ ಈ ಯೋಜನೆಯು ಪಾತ್ರ ವಹಿಸಿತ್ತು.

2018 ಡಿಸೆಂಬರ್ ಮತ್ತು 2019 ನವೆಂಬರ್ ನಡುವೆ ಒಂಭತ್ತು ಕೋಟಿಗೂ ಅಧಿಕ ರೈತರು ಪಿಎಂ-ಕಿಸಾನ್ ಯೋಜನೆಯಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು,ಈ ಪೈಕಿ 7.62 ಕೋ. ಅಥವಾ ಶೇ.84ರಷ್ಟು ರೈತರು ಮೊದಲ ಕಂತನ್ನು ಸ್ವೀಕರಿಸಿದ್ದಾರೆ. ಎರಡನೇ ಕಂತಿನ ಮೂಲಕ ಸುಮಾರು 6.5 ಕೋ.ಮತ್ತು ಮೂರನೇ ಕಂತಿನಡಿ 3.85 ಕೋ.ರೈತರಿಗೆ ಹಣವನ್ನು ಪಾವತಿಸಲಾಗಿದೆ ಎಂದು ಆರ್‌ಟಿಐ ಅರ್ಜಿಯೊಂದಕ್ಕೆ ಉತ್ತರವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News