ಯುಎಸ್ ಓಪನ್‌ನಿಂದ ಹಿಂದೆ ಸರಿದ ಸ್ವಿಟೋಲಿನಾ, ಬೆರ್ಟೆನ್ಸ್

Update: 2020-08-09 07:33 GMT

ನ್ಯೂಯಾರ್ಕ್: ಎಡಬಿಡದೆ ಕಾಡುತ್ತಿರುವ ಕೋವಿಡ್-19 ಕಾರಣಕ್ಕೆ ವಿಶ್ವದ ನಂ.5ನೇ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಹಾಗೂ ನಂ.7ನೇ ಆಟಗಾರ್ತಿ ಕಿಕಿ ಬೆರ್ಟೆನ್ಸ್ ಈ ತಿಂಗಳಾಂತ್ಯದಲ್ಲಿ ಅಮೆರಿಕದಲ್ಲಿ ಆರಂಭವಾಗಲಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಆಟಗಾರರ ಪಟ್ಟಿ ಬೆಳೆಯುತ್ತಾ ಸಾಗಿದೆ.

ಪುರುಷರ ಸಿಂಗಲ್ಸ್‌ನ ಹಾಲಿ ಚಾಂಪಿಯನ್ ರಫೆಲ್ ನಡಾಲ್ ಹಾಗೂ ವಿಶ್ವದ ನಂ.1 ಆಟಗಾರ್ತಿ ಅಶ್ಲೆಘ್ ಬಾರ್ಟಿ ಯುಎಸ್ ಓಪನ್‌ನ ತಾಲೀಮು ಟೂರ್ನಿಯಾಗಿರುವ ವೆಸ್ಟರ್ನ್ -ಸದರ್ನ್ ಓಪನ್ ಹಾಗೂ ಹಾರ್ಡ್‌ಕೋರ್ಟ್ ಗ್ರಾನ್‌ಸ್ಲಾಮ್ ಟೂರ್ನಿ ಯುಎಸ್ ಓಪನ್‌ನಿಂದ ಈಗಾಗಲೇ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

‘‘ಸುರಕ್ಷಿತ ವಾತಾವರಣದಲ್ಲಿ ಟೂರ್ನಿಯನ್ನು ನಡೆಸಲು ಪಡುತ್ತಿರುವ ಎಲ್ಲ ಪ್ರಯತ್ನವನ್ನು ನಾನು ಅರ್ಥ ಮಾಡಿಕೊಳ್ಳುವ ಜೊತೆಗೆ ಅದನ್ನು ಗೌರವಿಸುವೆ. ಆದರೆ, ನನಗೆ ಈಗಲೂ ಅಮೆರಿಕಕ್ಕೆ ಪ್ರಯಾಣಿಸಲು ಇಷ್ಟವಿಲ್ಲ. ನನ್ನ ತಂಡ ಹಾಗೂ ಸ್ವತಃ ನಾನು ದೊಡ್ಡ ಅಪಾಯಕ್ಕೆ ಸಿಲುಕಲು ಸಿದ್ಧವಿಲ್ಲ’’ ಎಂದು ಕಳೆದ ವರ್ಷದ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ್ದ ಉಕ್ರೇನ್‌ನ ಆಟಗಾರ್ತಿ ಸ್ವಿಟೋಲಿನಾ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News