ಭಾರೀ ಮಳೆಗೆ ಕೊಂಕಣ ರೈಲ್ವೆ ಸುರಂಗಕ್ಕೆ ಹಾನಿ, ಗೋವಾಕ್ಕೆ ರೈಲು ಸಂಚಾರ ವ್ಯತ್ಯಯ

Update: 2020-08-09 09:03 GMT

ಮುಂಬೈ, ಆ.9: ಕೊಂಕಣ ರೈಲ್ವೆಯ ಕಾರವಾರ ವಿಭಾಗದಲ್ಲಿ ಮಡ್ಗಾಂವ್‌ಗಿಂತ ಸ್ವಲ್ಪ ಮೊದಲು ಭಾರೀ ಮಳೆಗೆ ಪ್ರೆನೆಮ್ ಸುರಂಗದ ಗೋಡೆಗಳಿಗೆ ಹಾನಿಯಾದ ಪರಿಣಾಮ ಗೋವಾ ಹಾಗೂ ದಕ್ಷಿಣಕ್ಕೆ ತೆರಳುವ ರೈಲು ಓಡಾಟಕ್ಕೆ ಸಮಸ್ಯೆ ಎದುರಾಗಿದೆ.

1.5 ಕಿ.ಮೀ.ಉದ್ದದ ಸುರಂಗದ ಸುಮಾರು 10 ಮೀಟರ್ ಅಳತೆಯ ಗೋಡೆಯ ಒಂದು ಭಾಗವು ಕುಸಿದುಬಿದ್ದಿದೆ. ಈ ಸುರಂಗವನ್ನು 1998ರಲ್ಲಿ ನಿರ್ಮಿಸಲಾಗಿತ್ತು. ಭಾರೀ ಮಳೆಯ ಬಳಿಕ ಆಗಸ್ಟ್ 6ರಂದು ಸುರಂಗದ ಗೋಡೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ದುರಸ್ತಿ ಕಾರ್ಯಾಚರಣೆ ನಡೆಯುತ್ತಿದ್ದು, ಇದಕ್ಕೆ ಮಳೆ ಅಡ್ಡಿಯಾಗಿದೆ.

 ಮಳೆಯಿಂದಾಗಿ ನಿರಂತರವಾಗಿ ಸ್ಥಗಿತಗೊಳ್ಳುತ್ತಿರುವ ರೈಲು ಸಂಚಾರ ಪುನರ್ ಆರಂಭಗೊಳ್ಳಲು ಇನ್ನು ಎರಡು ವಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಕೊಂಕಣ ರೈಲ್ವೆಯ ಡಿಜಿಎಂ ಬಬನ್ ಘಾಟ್ಗೆ ತಿಳಿಸಿದ್ದಾರೆ.

ತಿರುವನಂತಪುರ ಹಾಗೂ ಎರ್ನಾಕುಲಂಗೆ ತೆರಳುವ ಕನಿಷ್ಠ 8 ರೈಲುಗಳನ್ನು ಪುಣೆ-ವಿರಾಜ್ ಮೂಲಕ ತಿರುಗಿಸಿ ಮಡ್ಗಾಂವ್ ತಲುಪಲು ಹಾಗೂ ದಕ್ಷಿಣಕ್ಕೆ ಹೋಗಲು ವ್ಯವಸ್ಥೆ ಮಾಡಲಾಗಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News