ಒಂದೆಡೆ ಮಾನವೀಯ ಸೇವೆ, ರಕ್ಷಣೆ, ರಕ್ತದಾನ; ಮತ್ತೊಂದೆಡೆ ಸಾವನ್ನು ಸಂಭ್ರಮಿಸುವ ವಿಕೃತಿ!

Update: 2020-08-09 09:44 GMT

ಕೊಚ್ಚಿ: ದುಬೈಯಿಂದ ಕೇರಳಕ್ಕೆ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಯಿಕ್ಕೋಡ್ ವಿಮಾನ ನಿಲ್ದಾಣದ ರನ್ ವೇಯಿಂದ ಜಾರಿ ಇಬ್ಭಾಗವಾಗಿದ್ದು, 19 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯು ದೇಶದ ಜನರಿಗೆ ಆಘಾತ ನೀಡಿದ್ದರೆ, ಕೇಸರಿ ಟ್ರೋಲ್ ಪಡೆಗಳು ಈ ದುರಂತವನ್ನು ಸಂಭ್ರಮಿಸುತ್ತಾ ವಿಕೃತಿ ಮೆರೆದಿವೆ.

ಶುಕ್ರವಾರ ನಡೆದಿದ್ದ ಈ ದುರಂತದಲ್ಲಿ ಇಬ್ಬರು ಪೈಲಟ್ ಗಳು ಸೇರಿ 19 ಜನರು ಮೃತಪಟ್ಟಿದ್ದಾರೆ. ಹಲವು ಜನರ ಪ್ರಾಣ ಉಳಿಸಿ ಕೊನೆಯುಸಿರೆಳೆದಿದ್ದ ಪೈಲಟ್ ದೀಪಕ್ ಸಾಥೆ ಮತ್ತು ಅಖಿಲೇಶ್ ಕುಮಾರ್ ರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ದುರಂತ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿ ವಿಮಾನದೊಳಗಿದ್ದವರನ್ನು ರಕ್ಷಿಸಿ, ರಕ್ತದಾನ ಮಾಡಿ ಮಾನವೀಯತೆ ಮೆರೆದ ಸ್ಥಳೀಯರೂ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಎಲ್ಲರ ಮಾನವೀಯ ಸೇವೆ, ಸಮಯಪ್ರಜ್ಞೆಗೆ ದೇಶಾದ್ಯಂತ ಜನರು ಶಹಬ್ಬಾಸ್ ಎಂದಿದ್ದರೆ ಮತ್ತೊಂದೆಡೆ ಕೇಸರಿ ಟ್ರೋಲ್ ಪಡೆಗಳು ಇದು ದುರಂತ ಎಂಬುದನ್ನೂ ಮರೆತು ಎಂದಿನಂತೆ ತಮ್ಮ ವಿಕೃತಿ ಮೆರೆದಿವೆ.

ಘಟನೆ ನಡೆದ ಬಳಿಕ ಸಾಮಾಜಿಕ ಜಾಲತಾಣ ಫೇಸ್ ಬುಕ್, ವಾಟ್ಸ್ಯಾಪ್ ಗಳಲ್ಲಿ ಈ ಕೇಸರಿ ಟ್ರೋಲ್ ದುಷ್ಕರ್ಮಿಗಳು ದ್ವೇಷದ, ಸಾವನ್ನು ಸಂಭ್ರಮಿಸುವ ಪೋಸ್ಟ್ ಗಳನ್ನು , ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

“ಸಾಯುತ್ತಾರೆ, ಏಕೆಂದರೆ ದುಬೈಯಿಂದ ಬಂದವರು”, “ನನ್ನ ಅಯ್ಯಪ್ಪ ಸ್ವಾಮಿ ಸಾಕು”, “ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಬೇಡಿ ಎಂದು ಹೇಳಿದ್ದೆವು. ಈಗ ಅನುಭವಿಸುತ್ತಿದ್ದಾರೆ”, “ರಾಮ ಮಂದಿರಕ್ಕೆ ಬೆಂಬಲ ನೀಡದ ಜಿಹಾದಿ ಕೇಂದ್ರವಾದ ಕೇರಳದಲ್ಲಿ ಇನ್ನು ಏನೆಲ್ಲಾ ಸಂಭವಿಸಲಿದೆ?” , “ಕೇರಳಿಗರಿಗೆ ಗೋಮಾತೆಯ ಆಶೀರ್ವಾದ”, “ದುಬೈಯಿಂದ ಸಾಕಷ್ಟು ಹಣ ಮಾಡಿಕೊಂಡು ಬಂದವರಲ್ಲವೇ, ಕೇರಳದಲ್ಲಿ ಅವರಿಗೆ ಏನೂ ಮಾಡಲು ಸಾಧ್ಯವಾಗದೆ ಇರಲಿ”, “ಎಲ್ಲರೂ ಸಾಯಲಿ” …. ಈ ರೀತಿಯ ಕೀಳುಮಟ್ಟದ ಕಾಮೆಂಟ್ ಗಳನ್ನು ಕೇಸರಿ ಟ್ರೋಲ್ ಗಳು ಮಾಡಿ ವಿಕೃತಿ ಮೆರೆದಿವೆ.

ಯಾವುದಾದರೂ ಅವಘಡಗಳು, ದುರಂತಗಳು , ಸಾವುಗಳು ಸಂಭವಿಸಿದಾಗ ಕೇಸರಿ ಪಡೆಗಳು ಸಂಭ್ರಮಿಸುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಗೌರಿ ಲಂಕೇಶ್ ಹತ್ಯೆಯಾದಾಗ, ಡಾ. ಯು.ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ನಿಧನರಾದಾಗ ಈ ದುಷ್ಕರ್ಮಿ ಕೇಸರಿ ಪಡೆಗಳು ಸಂಭ್ರಮಿಸಿದ್ದವು. ಇದೀಗ ದೇಶವೇ ನಲುಗಿದ ದುರಂತವೊಂದರ ಬಗ್ಗೆ ಕೇಸರಿ ಪಡೆಗಳು ಸಂಭ್ರಮಿಸುತ್ತಿವೆ ಮತ್ತು ಮತ್ಯಾರದೋ ಸಾವನ್ನು ನೋಡಿ ಹರ್ಷೋದ್ಗಾರ ಮಾಡುತ್ತಿವೆ.

ಕೇರಳ ವಿಮಾನ ದುರಂತದಲ್ಲಿ ಕೊನೆಯುಸಿರೆಳೆದ ದೀಪಕ್ ಸಾಥೆ ಈ ಹಿಂದೆ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಶನಿವಾರ ಅವರ ತಾಯಿಯ ಹುಟ್ಟುಹಬ್ಬವಿದ್ದು, ಮನೆಗೆ ಇದ್ದಕ್ಕಿದ್ದಂತೆ ಭೇಟಿ ನೀಡಿ ತಾಯಿಗೆ ಸರ್ ಪ್ರೈಸ್ ನೀಡಲು ಬಯಸಿದ್ದರು. ಘಟನೆಯಲ್ಲಿ ಮೃತಪಟ್ಟ ಸಹ ಪೈಲಟ್ ಅಖಿಲೇಶ್ ಕುಮಾರ್ ದುರಂತ ನಡೆದು ಕೆಲ ದಿನಗಳಲ್ಲೇ ತಂದೆಯಾಗಲಿದ್ದರು. ಅವರ ತುಂಬು ಗರ್ಭಿಣಿ ಪತ್ನಿ ಪತಿಗಾಗಿ ಇನ್ನೂ ಕಾಯುತ್ತಿದ್ದಾರೆ. ಕುಟುಂಬಸ್ಥರು ಅಖಿಲೇಶ್ ಸಾವನ್ನಪ್ಪಿರುವ ಬಗ್ಗೆ ಪತ್ನಿಗೆ ಇನ್ನೂ ಮಾಹಿತಿ ನೀಡಿಲ್ಲ. ಹೀಗೆ ದುರಂತದಲ್ಲಿ ಸಾವನ್ನಪ್ಪಿದ, ಗಾಯಗೊಂಡು ಎಲ್ಲವನ್ನೂ ಕಳೆದುಕೊಂಡ ಹಲವರ ಹಿಂದೆ ಕಲ್ಲು ಮನಸ್ಸು ಕೂಡ ಕರಗುವ ನೂರಾರು ಕಥೆಗಳಿವೆ.

ಈ ವಿಮಾನದಲ್ಲಿದ್ದ ಹಲವರು ದುಬೈಯಲ್ಲಿ ಕೆಲಸ ಕಳೆದುಕೊಂಡು ತಾಯ್ನಾಡಿನಲ್ಲಿ ಜೀವನ ಆರಂಭಿಸುವ ಕನಸಿನೊಂದಿಗೆ, ವಿವಾಹವಾಗಿ ಹೊಸ ಜೀವನಕ್ಕೆ ಕಾಲಿರಿಸುವ ಉದ್ದೇಶದೊಂದಿಗೆ, ಅನಾರೋಗ್ಯ ನಿಮಿತ್ತ ಬಂದವರು. ಹೀಗೆ ಕನಸುಗಳೊಂದಿಗೆ, ಹೊಸ ಜೀವನದ ನಿರೀಕ್ಷೆಯೊಂದಿಗೆ ತಮ್ಮ ನೆಲಕ್ಕೆ ಕಾಲಿಡುವ ಮುನ್ನವೇ ಹಲವರ ಕನಸುಗಳು ಕಮರಿವೆ. ಇಂತಹ ದುರಂತದ ಸಂದರ್ಭ ಒಂದು ವರ್ಗದ ಜನರು ತಮ್ಮ ಪ್ರಾಣದ ಹಂಗು ತೊರೆದು ನೂರಾರು ಜನರನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದರೆ, ಮತ್ತೊಂದು ವರ್ಗ ಏನನ್ನೂ ಮಾಡದೆ, ಸಾವನ್ನು ಸಂಭ್ರಮಿಸಿ, ದ್ವೇಷ ಹರಡುತ್ತಾ ತಮ್ಮ ಎಂದಿನ ಚಾಳಿ ಮುಂದುವರಿಸಿರುವುದು ದುರಂತವೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News